ಹರಿಹರ: ಭತ್ತದ ಬೆಳೆಯಲ್ಲಿ ಹಳದಿ ಕಾಂಡಕೊರಕ ಕೀಟಗಳ ನಿವಾರಣೆಗೆ ಮೋಹಕ ಬಲೆ ಅಳವಡಿಸಬೇಕೆಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಗಂಗನರಸಿ ಗ್ರಾಮದಲ್ಲಿ ಶನಿವಾರ ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಆಯೋಜಿಸಿದ್ದ ಭತ್ತದಲ್ಲಿ ಸಮಗ್ರ ಬೆಳೆ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.
ಯಾಂತ್ರೀಕೃತ ಭತ್ತದ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ವಾತಾವರಣದ ವೈಫಲ್ಯದಿಂದಾಗಿ ರೋಗ ಮತ್ತು ಕೀಟಗಳು ಹೆಚ್ಚಾಗುವ ಸಾದ್ಯತೆ ಇರುತ್ತದೆ ಎಂದರು.
ಕೇಂದ್ರದ ಕೀಟ ಮತ್ತು ರೋಗ ತಜ್ಞ ಡಾ.ಟಿ.ಜಿ. ಅವಿನಾಶ್ ಮಾತನಾಡಿ, ಭತ್ತದ ಬೆಳೆಯನ್ನು ನಾಟಿ ಮಾಡಿದ 25 ದಿವಸಗಳ ನಂತರ ಹಳದಿ ಕಾಂಡಕೊರಕ ಕೀಟಗಳ ನಿರ್ವಹಣೆಗಾಗಿ ಎಕರೆಗೆ ನಾಲ್ಕರಿಂದ ಐದರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು. ಮೋಹಕ ಬಲೆ ಹಾಕುವುದರಿಂದ ಗಂಡು ಚಿಟ್ಟೆಗಳು ಬಲೆಗಳಲ್ಲಿ ಬಿದ್ದು ಸಂತಾನೋತ್ಪತ್ತಿ ಕಡಿಮೆಯಾಗಿ ಭತ್ತದಲ್ಲಿ ಬಿಳಿ ತೆನೆಯಾಗುವುದನ್ನು ನಿಯಂತ್ರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಸಹಾಯಕ ನಿರ್ದೇಶಕ ಎ. ನಾರನಗೌಡ ಹಾಗೂ ಸುತ್ತಲಿನ ಪ್ರಗತಿಪರ ರೈತರು ಭಾಗವಹಿಸಿದ್ದರು.