ಜಿಲ್ಲೆ

ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‌ಮೆಂಟ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ಕಟ್ಟಡ ಕಾಮಗಾರಿಗೆ ಚಾಲನೆ

Tumakuru

ತುಮಕೂರು: ಅಪರಾಧ ಚಟುವಟಿಕೆಯಲ್ಲಿ ತೊಡಗುವವರು ತಾಂತ್ರಿಕವಾಗಿ ಹೆಚ್ಚು ಜ್ಞಾನಿಗಳಾಗುತ್ತಿದ್ದಾರೆ, ಅವರನ್ನು ನಿಯಂತ್ರಿಸುವ ಪೊಲೀಸರು ಅವರಿಗಿಂತ ಎರಡು ಪಟ್ಟು ಕೌಶಲ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಆರಂಭವಾದ ‘ಇಂಟಿಗ್ರೇಟೆಡ್ ಸಿಟಿ ಮ್ಯಾನೇಜ್‌ಮೆಂಟ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್’ ನೂತನ ಕಟ್ಟಡ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಕಲ್ಪಿಸುವ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ ತಂತ್ರಾಂಶಕ್ಕೆ ಚಾಲನೆ ನೀಡಲಾಗಿದೆ, ಇದನ್ನು ಸ್ಥಾಪಿಸಿದ್ದೇ ಸಾಧನೆಯಾಗದೆ ಜನರಿಗೆ ಇದರಿಂದ ಉಪಯೋಗವಾಗಬೇಕು ಎಂದರು. 39.97 ಕೋಟಿ ರೂ.ವೆಚ್ಚದಲ್ಲಿ ಮೊದಲ ಹಂತದ ಕಂಟ್ರೋಲ್ ಸೆಂಟರ್ ಕಾರ್ಯಾರಂಭ ಮಾಡಿದೆ, ನಗರದ ವಿವಿಧ ಕಡೆ 80 ಸಿಸಿ ಟಿವಿ ಅಳವಡಿಕೆ ಮತ್ತು ಸರ್ವೆಲೆನ್ಸ್, ವೇರಿಯಬಲ್ ಮೆಸೇಜಿಂಗ್ ಸಿಸ್ಟಂ, ಎನ್‌ವಿರಾನ್‌ಮೆಂಟ್ ಮಾನಿಟರಿಂಗ್, ಎಮರ್ಜೆನ್ಸಿ ರೆಸ್ಪಾನ್ಸ್ ಸಿಸ್ಟಂ ಮತ್ತು ತುಮಕೂರು ಒನ್ ಅಪ್ಲಿಕೇಷನ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಲಿ., ಎಂಡಿ ಟಿ. ಭೂಬಾಲನ್ ತಿಳಿಸಿದರು.

ಕಮಾಂಡ್ ಕಂಟ್ರೋಲ್ ಸೆಂಟರ್‌ನ 2ನೇ ಹಂತದ ಯೋಜನೆಯಡಿ 16.14 ಕೋಟಿ ರೂ. ವೆಚ್ಚದಲ್ಲಿ ನಗರದಾದ್ಯಂತ 216 ಸಿಸಿ ಟಿವಿ ಅಳವಡಿಕೆ, ಸರ್ವೆಲೆನ್ಸ್ ಮತ್ತು 10 ಇಂಟೆಲಿಜೆನ್ಸ್ ಸಿಗ್ನಲಿಂಗ್ ಜಂಕ್ಷನ್‌ಗಳೊಂದಿಗೆ ಫೇಷಿಯಲ್ ರೆಕಗ್ನಿಷನ್ ಸೌಲಭ್ಯ ಒದಗಿಸಲಾಗುವುದು ಎಂದು ವಿವರಿಸಿದರು.

ಬೀಗ ಹಾಕಿದ ಮನೆ ಮೇಲೆ ಕಣ್ಣು: ನಗರವಾಸಿಗಳು ರಜೆ ಮೇಲೆ ಅಥವಾ ಮತ್ತಿತರ ಸಂದರ್ಭಗಳಲ್ಲಿ ಮನೆಗೆ ಬೀಗ ಹಾಕಿದಾಗ ಮನೆ ಮಾಲೀಕರ ಮನವಿ ಮೇರೆಗೆ ಲಾಕ್ಡ್‌ಡೌನ್ ಹೌಸ್ ಮಾನಿಟರಿಂಗ್ ಸಿಸ್ಟಮ್ ಇಡಲಾಗುತ್ತದೆ. ನಾಗರಿಕರು ಸ್ಮಾರ್ಟ್‌ಸಿಟಿ ತುಮಕೂರು ಎಂಬ ಮೊಬೈಲ್ ಆ್ಯಪ್‌ನಲ್ಲಿ ಅಗತ್ಯವಾಗಿ ಮನೆ ನಂಬರ್ ಹಾಗೂ ಮೊಬೈಲ್ ನಂಬರ್ ಒದಗಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಈ ಸೇವೆ ಉಚಿತವಾಗಿದ್ದು, ನೋಂದಣಿ ನಂತರ ಮನೆಯಿಂದ ಪ್ರವಾಸ ಕೈಗೊಳ್ಳುವ ಒಂದು ದಿನ ಮುನ್ನ ಮೊಬೈಲ್ ಆ್ಯಪ್ ಮೂಲಕ ತಿಳಿಸಬೇಕು.

2 ವರ್ಷದಲ್ಲಿ ನಿರ್ಮಾಣ: 1918 ಚದರ ಮೀಟರ್ ಅಳತೆಯಲ್ಲಿ ಸೆಂಟರ್ ನೂತನ ಕಟ್ಟಡ ಅಂದಾಜು 10.15 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ನಿರ್ಮಾಣವಾಗಲಿದೆ. 2 ಅಂತಸ್ತಿನ ಕಟ್ಟಡವನ್ನು 12 ತಿಂಗಳ ಅವಧಿಯಲ್ಲಿ ನಿರ್ಮಿಸಲಾಗುತ್ತದೆ. ಬಳಿಕ ಟೌನ್‌ಹಾಲ್ ಕಟ್ಟಡದಲ್ಲಿರುವ ಕಂಟ್ರೋಲ್ ಸೆಂಟರ್ ಸ್ಥಳಾಂತರವಾಗಲಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತಿತರ ಇಲಾಖೆಗಳು ಈ ಕೇಂದ್ರದಲ್ಲಿ ಸಂಪರ್ಕ ಹೊಂದಲಿವೆ.

ನಗರ ವ್ಯಾಪ್ತಿಯಲ್ಲಿ ಕಳವು ತಡೆಗಟ್ಟಲು ಬೀಗ ಹಾಕಿದ ಮನೆಗಳ ಮೇಲೆ ನಿಗಾ ಇಡಲು ಸ್ಮಾರ್ಟ್‌ಸಿಟಿ ಮತ್ತು ತುಮಕೂರು ಪೊಲೀಸ್ ಇಲಾಖೆಯಿಂದ ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಡಾ.ಕೆ.ವಂಶಿಕೃಷ್ಣ ಜಿಲ್ಲಾ ಪೊಲೀಸ್ ಅಧೀಕ್ಷಕ