ಎಚ್.ಎಸ್.ಭರತ್ ಕುಮಾರ್ ಶ್ರೀರಂಗಪಟ್ಟಣ
ಸಮಗ್ರ ಕೃಷಿ ಕಾಯಕದಿಂದ ಸಮೃದ್ಧ ಬದುಕು ನಿಶ್ಚಿತ ಎಂಬ ಸತ್ಯ ಕಡಿಮೆ ಜಮೀನು ಹೊಂದಿದ ಹಲವು ಸಣ್ಣ ರೈತರ ಕ್ರಾಂತಿಕಾರಿ ನಡೆಯಿಂದ ಮೇಲಿಂದ ಮೇಲೆ ಸಾಬೀತಾಗುತ್ತಿದ್ದು, ಕೆಲಸ ಅರಸಿ ಪಟ್ಟಣಗಳತ್ತ ಮುಖ ಮಾಡಿರುವ ಗ್ರಾಮಾಂತರ ಪ್ರದೇಶಗಳ ನಿರುದ್ಯೋಗಿ ಯುವಕರಿಗೆ ಪ್ರೇರಣೆಯಾಗಿದೆ.
ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ದೊಡ್ಡಅಂಕನಹಳ್ಳಿ ಗ್ರಾಮದ ರೈತ ವೆಂಕಟೇಶ್ ತಮಗಿರುವ ಜಮೀನಿನಲ್ಲಿ ಕಡಿಮೆ ನೀರಿನ ಸೌಲಭ್ಯದ ಜತೆಗೆ ಸರ್ಕಾರ ನೀಡುವ ಸವಲತ್ತುಗಳನ್ನು ಅತ್ಯಂತ ಜಾಣ್ಮೆಯಿಂದ ಬಳಸಿಕೊಂಡು ಸಮಗ್ರ ಕೃಷಿಯಲ್ಲಿ ಕಾಯಕ ಯೋಗಿಯಂತೆ ನಿತ್ಯ ತೊಡಗಿಕೊಂಡು ವಾರ್ಷಿಕ 8 ರಿಂದ 10 ಲಕ್ಷದ ವರೆಗೆ ಆದಾಯಗಳಿಸುವ ಜತೆಗೆ ಉತ್ತಮ ಆರೋಗ್ಯದೊಂದಿಗೆ ಕುಟುಂಬಸ್ಥರೊಂದಿಗೆ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.
ರೈತ ವೆಂಕಟೇಶ್ ದೊಡ್ಡಂಕನಹಳ್ಳಿ ಗ್ರಾಮದಲ್ಲಿ ಒಟ್ಟು 3.5 ಎಕರೆ ಜಮೀನು ಹೊಂದಿದ್ದು, ರೇಷ್ಮೆ ಸಾಕಣೆಗಾಗಿ 1 ಎಕರೆಯಲ್ಲಿ ಹಿಪ್ಪುನೇರಳೆ ಬೆಳೆ, 1.5 ಎಕರೆಯಲ್ಲಿ ಸೊಪ್ಪು ಹಾಗೂ ತೋಟಗಾರಿಕೆ ಬೆಳೆ, ಉಳಿದಂತೆ 20 ಗುಂಟೆ ಭತ್ತ ಹಾಗೂ 20 ಗುಂಟೆ ರಾಗಿ ಜತೆಗೆ ಸುತ್ತಲು ತೆಂಗು, ತೇಗ, ಸಿಲ್ವರ್, ಹುಣಸೆ ಹಾಗೂ ಬೇವಿನ ಮರಗಳನ್ನು ಬೆಳೆಯುತ್ತಿದ್ದಾರೆ.
ಸೊಪ್ಪು-ತರಕಾರಿ ಬೆಳೆದು ನಿತ್ಯ ಆದಾಯ: ರೈತ ವೆಂಕಟೇಶ್ ಸಕ್ರಿಯ ಕೃಷಿಕರಾಗಿ ಕೃಷಿ ಜಮೀನಿನಲ್ಲಿ ತೊಡಗಲು ಮುಖ್ಯ ಕಾರಣ ಈ ಸೊಪ್ಪು-ತರಕಾರಿ ಬೆಳೆ. 1 ಎಕರೆಯಲ್ಲಿ ಹಿಪ್ಪು ನೇರಳೆ ಸಸಿಗಳ ನೆಟ್ಟಿರುವ ಮಧ್ಯಭಾಗದಲ್ಲಿ ಖಾಲಿ ಸಿಗುವ 6*6 ಪಟದ ಸಾಲು ಜತೆಗೆ 1.5 ಎಕರೆ ಸೇರಿದಂತೆ ಒಟ್ಟು 2.5 ಎಕರೆಯಲ್ಲಿ ಪುದಿನ, ದಂಟು, ಕೀರೆ, ಕಿಲ್ಕೀರೆ, ಪಾಲಕ್, ಸಬ್ಸಿಗೆ, ಕೊತ್ತಂಬರಿ, ಮೆಂತ್ಯ ಸೊಪ್ಪ್ಪುಗಳನ್ನು ಸ್ಪ್ರಿಂಕ್ಲರ್‌ಗಳಿಂದ ತುಂತುರು ನೀರಾವರಿ ಮೂಲಕ ನೀರೊದಗಿಸಿ ಬೆಳೆಯುತ್ತಿದ್ದಾರೆ. ಇದರೊಂದಿಗೆ ಹೀರೆಕಾಯಿ, ಬೆಂಡೆಕಾಯಿ ಹಾಗೂ ಟೊಮ್ಯಾಟೋವನ್ನು ತರಕಾರಿ ಬೆಳೆಯಾಗಿ ಬೆಳೆದು ನಿತ್ಯವೂ ಗ್ರಾಮಕ್ಕೆ ಸಮೀಪದಲ್ಲಿರುವ ಮೈಸೂರು ಮಹಾನಗರದ ಮಾರುಕಟ್ಟೆಗೆ ತಮ್ಮದೆ ಗೂಡ್ಸ್ ವಾಹನದಲ್ಲಿ ಕೊಂಡೊಯ್ದು ಮಾರಾಟ ಮಾಡಿ ತಮ್ಮ ಖರ್ಚು-ವೆಚ್ಚ ಕಳೆದು ನಿತ್ಯವು 4 ರಿಂದ 5 ಸಾವಿರ ಉಳಿತಾಯ ಮಾಡುತ್ತಿದ್ದಾರೆ.
ರೇಷ್ಮೆ ಬೆಳೆ ಸಮೃದ್ಧತೆ ಕಂಡರೆ ಬಂಪರ್ ಆದಾಯ: ರೇಷ್ಮೆ ಕೃಷಿಮಾಡಿ ಅದರಲ್ಲೂ ಉತ್ತಮ ಆದಾಯ ಕಾಣುವಲ್ಲಿ ಸಹ ವೆಂಕಟೇಶ್ ಯಶಸ್ಸು ಕಂಡಿದ್ದಾರೆ. ಶೇ.ನೂರಕ್ಕೆ ನೂರರಷ್ಟು ರೇಷ್ಮೆ ಬೆಳೆ ಆದಾಯ ನೀಡುವ ಹಿನ್ನೆಲೆ ಹಿಪ್ಪುನೇರಳೆ ಬೆಳೆದು ರೇಷ್ಮೆ ಹುಳು ಸಾಕಣೆಗೆ ಮನೆಯಲ್ಲೇ ಸುರಕ್ಷಿತ ಸ್ಥಳ ನಿರ್ಮಿಸಿ ಚಂದ್ರಿಕೆಗಳನ್ನು ಇರಿಸಿರುವ ರೈತ ವೆಂಕಟೇಶ್ ಚಾಕಿ ಸೆಂಟರ್‌ಗಳಿಂದ ತಂದ ರೇಷ್ಮೆ ಹುಳುವಿನ ಮರಿಗಳನ್ನು ಚಂದ್ರಿಕೆಗಳಲ್ಲಿಟ್ಟು ಸೊಪ್ಪು ಹಾಕಿ ಗೂಡು ಕಟ್ಟಿದ ಬಳಿಕ ಸುಮಾರು ನೂರು ಕ್ವಿಂಟಾಲ್ ಮಾರಾಟ ಮಾಡಿ ಬರೋಬ್ಬರಿ 6 ರಿಂದ 7 ಲಕ್ಷದ ವರೆಗೆ ಆದಾಯ ಕಂಡಿದ್ದಾರೆ.
ತಮಗಿರುವ 1 ಎಕರೆ ಜಮೀನಿನಲ್ಲಿ ನೆಟ್ಟಿರುವ ಹಿಪ್ಪುನೇರಳೆ ಸಸಿಗಳು ಸುಮಾರು 5-6 ವರ್ಷಗಳ ಕಾಲ ಸಮೃದ್ಧವಾಗಿ ಎಲೆಗಳನ್ನು ಬಿಡುತ್ತವೆ. ಬಿಟ್ಟಂತಹ ಎಲೆಗಳು ಕಟಾವಿಗೆ ಬರಲು ಬರೋಬ್ಬರಿ 60 ದಿನಗಳ ಸಮಯ ಹಿಡಿಯಲಿದ್ದು, ಈ ಬೆಳೆಗೆ ಯಾವುದೇ ಕೀಟನಾಶಕ ಸಿಂಪಡಿಸದ ಕಾರಣ ಈ ರೇಷ್ಮೆ ಕಟಾವಿಗೆ ಬರುವ ಅವಧಿಯೊಳಗೆ ಖಾಲಿ ಇರುವ ಮಧ್ಯಭಾಗದ ಸಾಲಿನಲ್ಲಿ 25 ದಿನಗಳೊಳಗೆ ಕಟಾವಿಗೆ ಬರುವ ಕೀರೆ, ಮೆಂತ್ಯ ಸೊಪ್ಪುಗಳನ್ನು ತಿಂಗಳಲ್ಲಿ 1 ಬ್ಯಾಚ್ ಬೆಳೆದುಕೊಂಡು ಮತ್ತೊಂದು ಬ್ಯಾಚ್‌ನಲ್ಲಿ ಸಂಪೂರ್ಣ ರೇಷ್ಮೆ ಮಾತ್ರ ಬೆಳೆಯುತ್ತಾರೆ.
ಭತ್ತ-ರಾಗಿ ಬೆಳೆಯಲ್ಲೂ ಮುಂಚೂಣಿ: ದೊಡ್ಡ ಅಂಕನಹಳ್ಳಿ ವ್ಯಾಪ್ತಿಯಲ್ಲಿನ ಭೂಮಿಯನ್ನು ಮೊದಲೆಲ್ಲಾ ಫಲವತ್ತತೆ ಇಲ್ಲದ ಭೂಮಿ ಎನ್ನಲಾಗುತ್ತಿತ್ತು. ವರುಣಾ ನಾಲೆಯಲ್ಲಿ ನೀರು ಪೂರೈಕೆ ಸೌಲಭ್ಯ ಕಂಡ ಬಳಿಕ ಈ ಭಾಗದಲ್ಲೂ ಹಸಿರು ಕಳೆಗಟ್ಟಿತು. ಹೀಗಾಗಿ ರೈತ ವೆಂಕಟೇಶ್ ಹೆಚ್ಚು ತರಕಾರಿ ಮತ್ತು ಸೊಪ್ಪು ಬೆಳೆಗೆ ಮಾನ್ಯತೆ ನೀಡಿದ್ದು, ತಮ್ಮ 20 ಗುಂಟೆ ಜಮೀನಿನಲ್ಲಿ ಭತ್ತ ಹಾಗೂ 20 ಗುಂಟೆಯಲ್ಲಿ ರಾಗಿ ಧಾನ್ಯಗಳ ಬೆಳೆಯನ್ನು ತಮ್ಮ ಕುಟುಂಬಸ್ಥರ ಆಹಾರಕ್ಕಾಗಿ ಸಮೃದ್ಧವಾಗಿಯೇ ಬೆಳೆದುಕೊಳ್ಳುತ್ತಿದ್ದಾರೆ.
ವಾಣಿಜ್ಯ ದೃಷ್ಠಿಯಿಂದ ತೋಟಗಾರಿಕಾ ಬೆಳೆಗಳಲ್ಲಿ ಪ್ರಗತಿ: ರೈತ ವೆಂಕಟೇಶ್ ತೋಟಗಾರಿಕಾ ಬೆಳೆಯಲ್ಲಿ ಆದಾಯಗಳಿಸಲು ದೀರ್ಘಾವಧಿಯ ಯೋಜನೆ ರೂಪಿಸಿಕೊಂಡು 1ಎಕರೆಯಲ್ಲಿ ಉತ್ತಮ ಕೃಷಿ ಮಾಡಿದ್ದು, ಇದಕ್ಕಾಗಿ 60-ತೆಂಗು, 06-ಮಾವು, 20-ಸಪೋಟ, 05-ಪಪ್ಪಾಯ, 20-ಬಾಳೆ, 06- ಹುಣಸೆ ಮರಗಳನ್ನು ಬೆಳೆಸಿದ್ದಾರೆ. ಇನ್ನು ಜಮೀನಿನ ಸುತ್ತಲು 45-ತೇಗ, 45-ಸಿಲ್ವರ್ ಹಾಗೂ 06- ಬೇವಿನ ಮರಗಳನ್ನು ಹೊಂದಿದ್ದಾರೆ. ಹಣ್ಣು ಬೆಳೆಗಳ ಮಾರಾಟದಿಂದಲೂ ಸರಾಸರಿ ವಾರ್ಷಿಕ 50 ಸಾವಿರದವರೆಗೆ ಆದಾಯ ಕಾಣುತ್ತಿದ್ದಾರೆ.
ಕೃಷಿಗೆ ಜಾನುವಾರುಗಳ ನೆರವು: ವೆಂಕಟೇಶ್ ತಮ್ಮ ಸಮಗ್ರ ಕೃಷಿಯ ಅವಿಭಾಜ್ಯ ಅಂಗವೆನ್ನುವಂತೆ ಹಸುಗಳು-ಆಡುಗಳ ಸಾಕಣೆ ಹಾಗೂ ಕುಕ್ಕುಟೋದ್ಯಮಕ್ಕೂ ಮಾನ್ಯತೆ ನೀಡಿದ್ದಾರೆ. ಪ್ರಸ್ತುತ 04 ರಾಸುಗಳನ್ನು ಸಲಹಿ ನಿತ್ಯ 2 ಸಮಯ ಹಾಲು ಉತ್ಪಾದಿಸುತ್ತಿರುವ ಇವರು 10 ಆಡುಗಳ ಜತೆಗೆ 20 ನಾಟಿ ಕೋಳಿಗಳ ಸಾಕಣೆ ಮಾಡಿದ್ದಾರೆ. ಜತೆಗೆ ತಮ್ಮ ಜಮೀನಿನಲ್ಲಿ ಎರೆಹುಳು ಉತ್ಪಾದನಾ ಘಟಕ ಸಹ ನಿರ್ಮಾಣ ಮಾಡಿದ್ದಾರೆ. ಜಾನುವಾರುಗಳಿಂದ ಸಂಗ್ರಹವಾದ ಗೊಬ್ಬರ ಮತ್ತು ಎರೆಹುಳುವನ್ನು ತಮ್ಮ ಜಮೀನುಗಳಲ್ಲಿನ ಬೆಳೆಗಳಿಗೆ ಜೀವಾಮೃತದೊಂದಿಗೆ ಹಾಕಿ ಉತ್ತಮ ಫಲವತ್ತತೆ ಕಾಯ್ದುಕೊಂಡಿದ್ದಾರೆ.