ಮಂಡ್ಯ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಗಾಗಿ ಹಲವಾರು ಸೌಲಭ್ಯಗಳಿದ್ದು, ಎಲ್ಲರೂ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಇನ್‌ಟೆಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿ ಸಲಹೆ ನೀಡಿದರು.
ನವ ನಿರ್ಮಾಣ ಕಟ್ಟಡ ಕಟ್ಟುವವರ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಕರ್ನಾಟಕ ಸ್ಟೇಟ್ ಫೆಡರೇಷನ್ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಶಾಖೆ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಸಂಘದಲ್ಲಿ ಹುಟ್ಟಿನಿಂದ ಸಾಯುವವರೆಗೆ ಸೌಲಭ್ಯಗಳು ದೊರೆಯುತ್ತವೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಲ್ಯಾಣ ಮಂಡಳಿಯಲ್ಲಿ ಏನೆಲ್ಲ ಸೌಲಭ್ಯಗಳಿವೆ ಎಂಬುದರ ಬಗ್ಗೆ ವಿವರಣೆ ನೀಡಿದರು.
ಸಂಘಟನೆ ರಾಜ್ಯಾಧ್ಯಕ್ಷ ಎಚ್.ಸಿ.ಶಾಮಣ್ಣರೆಡ್ಡಿ ಮಾತನಾಡಿ, ಕಾರ್ಮಿಕರು ಅತಂತ್ರ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ನೋವಿನ ಸಂಗತಿ. ಕಾರ್ಮಿಕರು ಕಟ್ಟಿಡ ಮನೆಗಳು, ಸೇತುವೆಗಳು, ರಸ್ತೆಗಳನ್ನು ನೋಡಿ ಆನಂದಿಸುವ ವಾತಾವರಣ ಕಾರ್ಮಿಕರಿಗಿಲ್ಲ. ಅದೇನಿದ್ದರೂ ಉಳ್ಳುವರಿಗೆ ಸಲ್ಲುತ್ತದೆ. ಆದರೆ ಸರ್ಕಾರ ಜಾರಿಗೊಳಿಸುವ ಕಲ್ಯಾಣ ಮಂಡಳಿಯಲ್ಲಿ ದೊರೆಯಬಹುದಾದ ಸೌಲಭ್ಯಗಳನ್ನಾದರೂ ಪಡೆದುಕೊಳ್ಳಲು ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಯಲ್ಲಪ್ಪ ಮಾತನಾಡಿ, ಕಾರ್ಮಿಕರು ಅಭದ್ರತೆಯ ಜತೆಗೆ ಆತಂಕದಿಂದ ಕೆಲಸ ಮಾಡುತ್ತಿದ್ದಾರೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವ ಅಲೆಮಾರಿ ಬದುಕು ನಿರ್ಮಾಣವಾಗಿದೆ. ಬದುಕನ್ನು ಕಟ್ಟಿಕೊಳ್ಳಲು ಕಟ್ಟಡ ಕಾರ್ಮಿಕರು ಐಎನ್‌ಟಿಯುಸಿ ನೇತೃತ್ವದಲ್ಲಿ ಇತರೆ ಕಾರ್ಮಿಕ ಸಂಘಟನೆಗಳ ಜತೆಗೂಡಿ ನಡೆಸಿದ ಹೋರಾಟದ ಫಲವಾಗಿ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ರಚಿಸಿ 11 ರೀತಿಯ ಸೌಲಭ್ಯಗಳನ್ನು ಜಾರಿಗೊಳಿಸಿದೆ ಎಂದು ಸರ್ಕಾರದ ಸೌಲಭ್ಯಗಳ ಕುರಿತಂತೆ ಮಾಹಿತಿ ನೀಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶುಭದಾಯಿನಿ, ಇನ್‌ಟೆಕ್ ರಾಜ್ಯ ಸಮಿತಿ ಪದಾಧಿಕಾರಿಗಳಾದ ದಾಸ್, ಮಂಜುನಾಥ್, ವೆಂಕಟೇಶ್, ಜಿಲ್ಲಾಧ್ಯಕ್ಷ ಜೆ.ಅರ್ಕೇಶ್, ಯುವಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಶೈಲೇಂದ್ರಕುಮಾರ್, ಮುಖಂಡ ಸುದರ್ಶನ್ ಇತರರಿದ್ದರು.