ಶೃಂಗೇರಿ: ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ ಸದಸ್ಯರು ಅಥವಾ ಅವಲಂಬಿತ ಕೂಲಿ ಕಾರ್ಮಿಕರು ಗುಂಪು ವಿಮೆ ಮಾಡಿಸಬೇಕು. ಕೃಷಿ ಚಟುವಟಿಕೆ ನಡೆಸುವ ಸಂದರ್ಭದಲ್ಲಿ ಮೃತಪಡುವುದು, ಅಪಘಾತದ ಚಿಕಿತ್ಸೆಗೆ ಪರಿಹಾರ ನೀಡಲಾಗುತ್ತದೆ ಎಂದು ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಹೇಳಿದರು.
ಹುಲ್ಸೆ ರತ್ನಾಕರ್ ತೋಟದಲ್ಲಿ ಅಡಕೆ ಮರದಿಂದ ಬಿದ್ದು ಮೃತಪಟ್ಟ ರಾಮ ಅವರ ಕುಟುಂಬಕ್ಕೆ ಪಟ್ಟಣದ ಮ್ಯಾಮ್ಕೋಸ್ ಶಾಖೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರು ಲಕ್ಷ ರೂಪಾಯಿ ಮೊತ್ತದ ಚೆಕ್ ನೀಡಿ ಮಾತನಾಡಿದರು. ರೈತರು ಅಥವಾ ಅವಲಂಬಿತ ಕಾರ್ಮಿಕರು ಸಹ ಕೃಷಿ ಚಟುವಟಿಕೆ ನಡೆಸುವ ಸಂದರ್ಭದಲ್ಲಿ ಯಾವುದೇ ರೀತಿಯ ಅಪಘಾತಕ್ಕೆ ಒಳಗಾದರೂ ವಿಮೆ ನೆರವಿಗೆ ಬರುತ್ತದೆ ಎಂದರು.
ಮ್ಯಾಮ್ಕೋಸ್ ಸದಸ್ಯ ಹುಲ್ಸೆ ರತ್ನಾಕರ್ ಮಾತನಾಡಿ, ಕಳೆದ ಸಾಲಿನಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾರ್ಮಿಕ ರಾಮ ಮರದಿಂದ ಬಿದ್ದು ಮೃತಪಟ್ಟಿದ್ದರು. ಬಡ ಕುಟುಂಬಕ್ಕೆ ಸಂಸ್ಥೆ ಯೋಜನೆಯಿಂದ ಆರ್ಥಿಕ ಭದ್ರತೆ ದೊರಕಿದೆ. ಈ ಯೋಜನೆ ಪರಿಣಾಮಕಾರಿಯಾಗಲು ಎಲ್ಲ ಸದಸ್ಯರೂ ವಿಮಾ ಮೊತ್ತ ಪಾವತಿಸಬೇಕು ಎಂದು ತಿಳಿಸಿದರು.
ವಿಮಾ ಮೊತ್ತದ ಚೆಕ್ ಅನ್ನು ರಾಮ ಅವರ ಪತ್ನಿ ವಿಮಲಾ, ಪುತ್ರಿ ನಾಗವೇಣಿ ಸ್ವೀಕರಿಸಿದರು. ನಿರ್ದೇಶಕರಾದ ಟಿ.ಕೆ.ಪರಾಶರ, ಅಂಬ್ಲೂರು ಸುರೇಶ್ಚಂದ್ರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗೇರುಬೈಲು ಶಂಕರಪ್ಪ, ವ್ಯವಸ್ಥಾಪಕ ಪರಶುರಾಮ್, ಸದಸ್ಯರಾದ ಮಕ್ಕಿವಳ್ಳಿ ಗೋಪಾಲ್,ಅಣ್ಣೇಗೌಡ, ಮಹೇಶ್ ನಾಯ್ಕ, ಶಿವರಾಜ್ ಇದ್ದರು.