ಜಿಲ್ಲೆ

ಮಾಪನ ಸಮಸ್ಯೆಯಿಂದ ಸಿಗದ ವಿಮೆ: ಆರಗ ಕಿಡಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಜಿಲ್ಲೆಯಲ್ಲಿ 280 ಮಳೆ ಮಾಪನ ಕೇಂದ್ರಗಳಿವೆ. ಇದರಲ್ಲಿ ಕಾರ್ಯನಿರ್ವಹಿಸುತ್ತಿರುವುದು 145. ಕೆಲವೆಡೆ ಇವುಗಳನ್ನು ಕಳ್ಳತನ ಮಾಡಿದ್ದಾರೆ. ಹಲವೆಡೆ ಮಾಪನ ಘಟಕದ ಮೇಲೆ ಶೀಟು ಅಳವಡಿಸಿದ್ದಾರೆ. ಹೀಗಾಗಿ ಮಳೆಯ ಪ್ರಮಾಣದ ನಿಖರತೆ ತಿಳಿಯುವುದಾದರೂ ಹೇಗೆ? ಎಂದು ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ಶನಿವಾರ ಜಿಪಂ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹವಾಮಾನ ಆಧಾರಿತ ಬೆಳೆ ವಿಮೆ ಜಾರಿಗೆ ತಂದಿದೆ. ಈ ವಿಮೆಯ ಪರಿಹಾರ ಸಿಗಬೇಕೆಂದರೆ ಮಳೆಯ ಸರಿಯಾದ ಮಾಪನವಾಗಬೇಕು. ಆದರೆ ಜಿಲ್ಲೆಯಲ್ಲಿ ಮಳೆ ಮಾಪನ ಘಟಕಗಳೇ ಸರಿಯಿಲ್ಲದ ಕಾರಣ ರೈತರಿಗೆ ಅನ್ಯಾಯವಾಗುತ್ತಿದೆ. ಬೆಳೆ ವಿಮೆ ಸಿಗುತ್ತಿಲ್ಲ. ಇದಕ್ಕೆ ಯಾರು ಹೊಣೆ? ಎಂದು ಕಿಡಿಕಾರಿದರು.

ಸಮಸ್ಯೆ ಆಲಿಸಿದ ಮಧು ಬಂಗಾರಪ್ಪ, ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ಎಲ್ಲ ಮಳೆ ಮಾಪನ ಕೇಂದ್ರಗಳು ಸುಸ್ಥಿರವಾಗಿ ಇರುವಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಬಳಿಕ ಆರಗ ಜ್ಞಾನೇಂದ್ರ ಕೋಪ ಕೊಂಚ ತಗ್ಗಿತು.