ಬಳ್ಳಾರಿ : ಕಳೆದ ಸಾಲಿನಲ್ಲಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮ ಯೋಜನೆಯಡಿ ನೋಂದಯಿಸಿದ ಹತ್ತು ಸಾವಿರಕ್ಕೂ ಅಧಿಕ ರೈತರಿಗೆ ಒಂಬತ್ತ ರಿಂದ ಹತ್ತು ಕೋಟಿ ರೂ. ವಿಮೆ ಹಣ ಖಾತೆಗೆ ಜಮೆಯಾಗಿಲ್ಲ.
ಅಕಾಲಿಕ ಮಳೆ, ಕೀಟ ಬಾಧೆ ಹಾಗೂ ಇತರೆ ರೋಗಗಳಿಂದ ಹಾನಿಯಾದರೆ ರೈತರಿಗೆ ಪರಿಹಾರ ರೂಪವಾಗಿ ಬೆಳೆ ವಿಮೆ ಕೈಹಿಡಿಯಲಿದೆ ಎಂಬ ಉದ್ದೇಶದಿಂದ ಕೃಷಿ ಇಲಾಖೆಯು ಕಳೆದ ಸಾಲಿನಲ್ಲಿ ಜಾಗೃತಿ ಮೂಡಿಸಿ ಕಳೆದ ಹತ್ತು ವರ್ಷಗಳ ನಂತರ ಹದಿನೈದು ಸಾವಿರಕ್ಕೂ ಅಧಿಕ ರೈತರು ವಿಮೆ ನೊಂದಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಭತ್ತ, ಮೆಣಸಿನಕಾಯಿ ಹಾಗೂ ಜೋಳಕ್ಕೆ ಹೆಚ್ಚಿನ ರೈತರು ನೋಂದಾಯಿಸಿಕೊಂಡಿದ್ದರು. ಸದ್ಯ ಮೆಣಸಿನಕಾಯಿ ಹಾಗೂ ಜೋಳದ ಇಳುವರಿ ನಿರೀಕ್ಷೆಗಿಂತ ಅಧಿಕ ಇಳುವರಿ ಬಂದಿದೆ.
ತಾಲೂಕು ನೋಂದಣಿ ವಿವರ : ಕಳೆದ ಸಾಲಿನಲ್ಲಿ ಜಿಲ್ಲೆಯ ಬಳ್ಳಾರಿ ತಾಲೂಕು 2631, ಕುರುಗೋಡು 964, ಸಿರಗುಪ್ಪ 7127, ಕಂಪ್ಲಿ 2467, ಸಂಡೂರು 2785 ಸೇರಿದಂತೆ ಒಟ್ಟಾರೆ 15,974 ರೈತರು ಕಳೆದ ಬಾರಿ 2.15 ಕೋಟಿ ರೂ. ಬೆಳೆ ವಿಮೆ ಪಾವತಿಸಿ ನೋಂದಯಿಸಿಕೊಂಡಿದ್ದಾರೆ. ಆದರೆ, ಈವರೆಗೆ ಕೇವಲ 959 ರೈತರಿಗೆ 32.19 ಲಕ್ಷ ರೂ. ವಿಮೆ ಹಣ ಬಿಡುಗಡೆಗೊಂಡಿದೆ.
ಇನ್ನೂ ಹತ್ತು ಸಾವಿರಕ್ಕೂ ಅಧಿಕ ರೈತರಿಗೆ ಒಂಬತ್ತರಿಂದ ಹತ್ತು ಕೋಟಿ ರೂ. ಹಣ ಬಿಡುಗಡೆಯಾಗಬೇಕಿದೆ. ಒಟ್ಟಾರೆ ಹದಿನೈದು ಸಾವಿರ ರೈತರಲ್ಲಿ ಐದು ಸಾವಿರ ರೈತರು ಮೆಣಸಿನಕಾಯಿ, ಜೋಳ, ಮುಸಕಿನ ಜೋಳಕ್ಕೆ ವಿಮೆ ನೋಂದಾಯಿಸಿಕೊಂಡಿದ್ದು ಈ ಎಲ್ಲ ಬೆಳೆಗಳೂ ಕಳೆದ ಸಾಲಿನಲ್ಲಿ ಉತ್ತಮ ಇಳುವರಿ ಬಂದಿರುವುದರಿಂದ ವಿಮೆ ಹಣ ಬಿಡುಗಡೆಗೊಳ್ಳಲ್ಲ. ಆದರೆ, ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಗೊಂಡಿದ್ದ ಭತ್ತ ಬೆಳೆದ ರೈತರಿಗೆ ವಿಮೆ ಬಿಡುಗಡೆಯಾಗದೆ ಇರುವುದು ಅಕ್ರೋಶಕ್ಕೆ ಕಾರಣವಾಗಿದೆ.
ವಿಮೆ ಕಾಯುತ್ತಿರುವ ರೈತರು : ಕಳೆದ ಸಾಲಿನಲ್ಲಿ ಭತ್ತ ನಾಟಿ ಮಾಡಿದ್ದ ರೈತರಿಗೆ ಹವಾಮಾನ ವೈಪರಿತ್ಯ ಕಾರಣದಿಂದ ನಿರೀಕ್ಷಿತ ಅವಧಿ ಭತ್ತ ಕಟಾವುಗೆ ಬರಲಿಲ್ಲ. ಇದರಿಂದ ಭತ್ತ ಕಟಾವು ಮುನ್ನವೇ ತುಂಗಭದ್ರ ಜಲಾಶಯದಿಂದ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಸಾವಿರಾರು ಎಕರೆಯಷ್ಟು ಪ್ರದೇಶ ನೀರಿಲ್ಲದೆ ಒಣಗಿತು. ಅಲ್ಲದೆ, ಕೆಳ ಭಾಗದ ಕಾಲುವೆಗಳಿಗೆ ನೀರು ಹರಿಯದ್ದರಿಂದ ಎಕರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರಲಿಲ್ಲ. ಈಗಾಗಲೇ ತುಂಗಭದ್ರ ಜಲಾಶಯದಿಂದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಹರಿಸಿದ್ದು ಜಿಲ್ಲೆಯ ರೈತರು ಭತ್ತ ನಾಟಿ ಮಾಡಲು ಜಮೀನುಗಳಲ್ಲಿ ಸಸಿ ಮಾಡಿ ಹಾಕಿಕೊಂಡಿದ್ದಾರೆ. ಪ್ರಸ್ತಕ ಸಾಲಿನ ಭತ್ತದ ನಾಟಿಯೂ ಕೆಲವಡೆ ಆರಂಭಗೊಂಡಿದೆ. ಆದರೆ, ಕಳೆದ ಬಾರಿನ ವಿಮೆ ಪರಿಹಾರ ಮಾತ್ರ ಬಂದಿಲ್ಲ. ವಿಮೆ ಹಣದಿಂದ ಪ್ರಸ್ತಕ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಎಂಬುದು ರೈತರ ಉದ್ದೇಶವಾಗಿದೆ.
ಬಾಕ್ಸ್ : ಜಿಲ್ಲೆಯಲ್ಲಿ ಭತ್ತದ ಬೆಳೆಯೂ ಪ್ರವಾಹ ಆಧಾರಿತ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಮಾಹಿತಿ ಅನುಸಾರ ಟಾಟಾ ಎಐಜಿ ಕಂಪನಿಯಿಂದ ವಿಮೆ ಹಣ ರೈತರ ಖಾತೆಗೆ ಪಾವತಿಯಾಗಲಿದೆ. ಭತ್ತವು ಕಟಾವುಗೊಂಡು ಹಲವು ತಿಂಗಳೂ ಕಳೆದರೂ ಈವರೆಗೆ ಅಧಿಕಾರಿಗಳು ಮಾಹಿತಿ ನೀಡಲು ವಿಳಂಬ ಏಕೆ ಎಂಬ ಪ್ರಶ್ನೆ ? ಉದ್ಭವವಾಗಿದೆ.
ಪ್ರಸ್ತಕ ಗುರಿ 20 ಸಾವಿರ : ಪ್ರಸ್ತಕ ಸಾಲಿನಲ್ಲಿ ಈಗಾಗಲೇ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಆಯಾ ಬೆಳೆಗಳಿಗೆ ತಕ್ಕಂತೆ ಕೊನೆಯ ದಿನಾಂಕ ಸೂಚಿಸಿದೆ. ಬಹುತೇಕ ಬೆಳೆಗಳಿಗೆ ನೋಂದಾಯಿಸಿಕೊಳ್ಳಲು ಈ ತಿಂಗಳು ಕೊನೆಯ ದಿನವಾಗಿದೆ. ಸದ್ಯ ಜಿಲ್ಲೆಯ ಐದು ತಾಲೂಕು ಸೇರಿ ಒಟ್ಟಾರೆ 406 ರೈತರು ನೋಂದಣಿಸಿಕೊಂಡಿದ್ದಾರೆ. ಆ. 14 ರವರೆಗೆ ಮಾತ್ರ ಭತ್ತಕ್ಕೆ ಅವಕಾಶವಿದೆ. ಬಹುತೇಕ ರೈತರು ಬೆಳೆ ವಿಮೆ ಹಣ ವರ್ಷಗಟ್ಟಲೇ ವಿಳಂಬವಾಗುವದರಿಂದ ಈ ಬಾರಿ ನೋಂದಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಕೃಷಿ ಇಲಾಖೆಯೂ ಇಪ್ಪತ್ತು ಸಾವಿರ ಗುರಿ ಹೊಂದಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು.
ಕೋಟ್... ಕಳೆದ ಸಾಲಿನಲ್ಲಿ ಭತ್ತಕ್ಕೆ ನೋಂದಯಿಸಿಕೊಂಡ ವಿಮೆ ಪರಿಹಾರ ಬರಬೇಕಿದೆ. ಈಗಾಗಲೇ ಕಂಪನಿಯಿಂದ ಹಣ ಬಿಡುಗಡೆಗೊಳಿಸುವ ಪ್ರಕ್ರಿಯೆಯಲ್ಲಿದ್ದ ಇನ್ನೂ ಎರಡ್ಮೂರು ದಿನಗಳಲ್ಲಿ ಬಿಡುಗಡೆಯಾಗಬಹುದು.
- ಎಂ. ಸೋಮಸುಂದರ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಬಳ್ಳಾರಿ