ಜಿಲ್ಲೆ

ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮೆ!, ಮೂಡಿದ ಆತ್ಮವಿಶ್ವಾಸ ಸಚಿವರಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಕರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನೂ ವಿಮೆ ವ್ಯಾಪ್ತಿಗೆ ಒಳಪಡಿಸುವ ಪ್ರಸ್ತಾವನೆಯೊಂದು ಕೇಂದ್ರಕ್ಕೆ ಸಲ್ಲಿಕೆಯಾಗಿದೆ.

ಕರ್ತವ್ಯನಿರತ ಆಶಾ ಕಾರ್ಯಕರ್ತೆಯರು ಮೃತಪಟ್ಟರೆ 50 ಲಕ್ಷ ರೂ. ವಿಮೆ ನೀಡಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೂ 30 ಲಕ್ಷ ರೂ.ವಿಮೆ ಸೌಲಭ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸ್ವತಃ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿರುವುದು ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸೇವೆ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದ್ದು, ಲಾಕ್‌ಡೌನ್ ಸನ್ನಿವೇಶದಲ್ಲಿ ಮನೆಬಾಗಿಲಿಗೇ ಊಟ ತಲುಪಿಸುವುದರಿಂದ ಹಿಡಿದು ಎಲ್ಲ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಾಗಿ ಪ್ರಾಣದ ಹಂಗು ತೊರೆದು ದುಡಿದ ಕಾರ್ಯಕರ್ತೆಯರನ್ನೂ ವಿಮೆ ವ್ಯಾಪ್ತಿಗೆ ಒಳಪಡಿಸಬೇಕೆಂಬುದು ಸಚಿವರ ನಿಲುವಾಗಿದೆ.

ಟಾಸ್ಕ್‌ಪೋರ್ಸ್‌ನಲ್ಲೂ ಕರ್ತವ್ಯ: ಕರೊನಾ ನಿಯಂತ್ರಣಕ್ಕೆ ರಚನೆಯಾಗಿರುವ ಟಾಸ್ಕ್‌ಪೋರ್ಸ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸುವುದು, ಗ್ರಾಮಕ್ಕೆ ಹೊಸ ವ್ಯಕ್ತಿಗಳು ಬಂದರೆ ಅಥವಾ ಅನಾರೋಗ್ಯಪೀಡಿತ ವ್ಯಕ್ತಿಗಳು ಕಂಡುಬಂದರೆ ಇಲಾಖೆಗೆ ಮಾಹಿತಿ ರವಾನಿಸುವ ಕೆಲಸ ಮಾಡಿದ್ದರಿಂದ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕರೊನಾ ಹರಡುವಿಕೆ ನಿಯಂತ್ರಣ ಸಾಧ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಆರೋಗ್ಯ ರಕ್ಷಣೆ ಜವಾಬ್ದಾರಿ: 6 ತಿಂಗಳಿಂದ 3 ವರ್ಷದವರೆಗೆ 32,685 ಮಕ್ಕಳು, 3 ರಿಂದ 6 ವರ್ಷದ 17,244 ಮಕ್ಕಳು ಹಾಗೂ 6,455 ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯ ರಕ್ಷಣೆ ನಡೆಯುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಸೋಂಕು ನಿಯಂತ್ರಣದ ಅರಿವು ಮೂಡಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಯಂ ಸ್ವಚ್ಛತೆ, ವೈದ್ಯಕೀಯ ಪರಿಕರ ಬಳಕೆ ಮತ್ತಿತರ ವಿಚಾರಗಳ ಬಗ್ಗೆ ತಿಳಿವಳಿಕೆ ನೀಡಿದ್ದಾರೆ.

ತಾಲೂಕುವಾರು ಅಂಗನವಾಡಿ ಕಾರ್ಯನಿರ್ವಹಣೆ: ಜಿಲ್ಲೆಯಲ್ಲಿ 1230 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ದೇವನಹಳ್ಳಿಯಲ್ಲಿ 264, ದೊಡ್ಡಬಳ್ಳಾಪುರ 369, ಹೊಸಕೋಟೆ 310 ಹಾಗೂ ನೆಲಮಂಗಲದಲ್ಲಿ 287 ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 121 ಮಿನಿ ಅಂಗನವಾಡಿಗಳು, ಪಂಚಾಯಿತಿ ಕಟ್ಟಡದಲ್ಲಿ 10, ಸಮುದಾಯ ಭವನದಲ್ಲಿ 71, ಶಾಲೆ ಕಟ್ಟಡದಲ್ಲಿ 56, ಬಾಡಿಗೆ ಕಟ್ಟಡದಲ್ಲಿ 122 ಅಂಗನವಾಡಿ ಕೇಂದ್ರಗಳು ಕಾರ್ಯನಿರತವಾಗಿವೆ.

ಕರೊನಾ ಕರ್ತವ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕರೊನಾ ಸೇನಾನಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ವಿಮೆ ವ್ಯಾಪ್ತಿಗೆ ಒಳಪಡಿಸಿದರೆ ಅವರಲ್ಲಿ ಮತ್ತಷ್ಟು ಸೇವಾ ಮನೋಭಾವ ಮೂಡಲು ಸಾಧ್ಯವಾಗುತ್ತದೆ. ಪುಷ್ಪಾರಾಯರ್, ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ