ತುರುವೇಕೆರೆ: ತಾಲೂಕಿನಲ್ಲಿ ಸುಮಾರು 15 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.
ತಾಲೂಕಿನ ಮಾದಿಹಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಹಸುಗಳ ಕಿವಿಗಳಿಗೆ ಓಲೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರಾಸುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಮೆ ಮಾಡಿಸಲಾಗುತ್ತಿದೆ. ಹಿಂದೆ 10 ಸಾವಿರದಿಂದ 60 ಸಾವಿರ ರೂ. ತನಕ ವಿಮೆ ಇತ್ತು. ಆದರೆ ಈ ಬಾರಿ 70 ಸಾವಿರ ರೂ. ವರೆಗೂ ವಿಮೆ ಸೌಲಭ್ಯ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಹಾಲು ಒಕ್ಕೂಟದಿಂದ ಶೇ.40 ಹಾಗೂ ರಾಸು ಅಭಿವೃದ್ಧಿ ನಿಧಿಯಿಂದ 40ರಷ್ಟು, ರೈತ ಕಲ್ಯಾಣ ಟ್ರಸ್ಟ್‌ನಿಂದ 20ರಷ್ಟು ಹಣ ವಿನಿಯೋಗ ಮಾಡಿ ರೈತರ ನೆರವಿಗೆ ಬರಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ. ಈ ಬಾರಿ ಸುಮಾರು 30 ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಕಲಾವತಿ, ರೂಪಶ್ರೀ, ರತ್ನಮ್ಮ, ಜ್ಯೋತಿ, ಕೆಂಪದೇವಮ್ಮ, ನೀಲಮ್ಮ, ಕವಿತಾ, ಮಹಾಲಕ್ಷ್ಮಮ್ಮ, ಕಾರ್ಯದರ್ಶಿ ವಿಶಾಲಾಕ್ಷಿ, ಗ್ರಾಮದ ಮುಖಂಡರಾದ ಎಂ.ವಿ.ಕುಮಾರ್, ಗಂಗಾಧರ್, ಕೆಂಪೇಗೌಡ, ಬಾಲರಾಜ್, ಶಿವಕುಮಾರ್, ವಿಸ್ತರ್ಣಾಧಿಕಾರಿಯಾದ ಮಂಜುನಾಥ್, ಕಿರಣ್, ದಿವಾಕರ್ ಸೇರಿ ಹಲವರು ಇದ್ದರು.