ಜಿಲ್ಲೆ

ರಾಹುಲ್ ಗಾಂಧಿ-ಸಿದ್ದರಾಮಯ್ಯ ಬಗ್ಗೆ ಅವಹೇಳನ, ಬಸನಗೌಡ ಪಾಟೀಲ ಯತ್ನಾಳ ಮೇಲೆ ಎಫ್‌ಐಆರ್...!


ವಿಜಯಪುರ: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಅವಾಚ್ಯವಾಗಿ ನಿಂದಿಸಿದ ಆರೋಪದ ಮೇರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮೇಲೆ ದೂರು ದಾಖಲಾಗಿದೆ.
ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಪರಸುರಾಮ ಬಾಬುರಾವ ಹೊಸಮನಿ ಎಂಬುವವರು ಗಾಂಧಿ ಚೌಕ್ ಠಾಣೆಯಲಿ ದೂರು ದಾಖಲಿಸಿದ್ದು, ಅದರಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರು ಶಾಂತಿ ಸೌಹಾರ್ದತೆ ಕದಡುವ ಯತ್ನ ನಡೆಸಿದ್ದಾರಲ್ಲದೇ ಭಯದ ವಾತಾವರಣ ನಿರ್ಮಿಸಿದ್ದಾರೆ. ಕೋಮು ಗಲಭೆ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ಇವರ ಮೇಲೆ ಯೋಗ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಪ್ರಕರಣದ ವಿವರ

ಅ. 15ರಂದು ಸಿದ್ಧೇಶ್ವರ ದೇವಸ್ಥಾನದ ಹತ್ತಿರ ಹಮ್ಮಿಕೊಂಡಿದ್ದ ವಕ್ಫ್ ಅದಾಲತ್ ಬಗೆಗಿನ ಪ್ರತಿಭಟನಾ ವೇದಿಕೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರು ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಅವರನ್ನು ‘ಏ ಛಿನಾಲ್ಕೆ ರಾಹುಲ್’ ಅಂತಾ ಬೈಯ್ದು ಮತ್ತು ರಾಜ್ಯ ಸಿಎಂ ಸಿದ್ದರಾಮಯ್ಯ ಅವರನ್ನು ‘ಏ ಸಿದ್ಯಾ ಬಾರೋಲೆ’ ಅನ್ನುತ್ತಾ ‘ನಿಮ್ಮ ಹೆಣ್ಮಕ್ಕಳು ಯಾರಗೂಡಾ ಮಲಗುತ್ತಾರೆ ಗೊತ್ತಿಲ್ಲ ಮಗನೆ’ ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ. ಅಲ್ಲದೇ, ಮಾತಿನ ಮಧ್ಯೆ ಜಾತಿ-ಜಾತಿ ಮಧ್ಯದಲ್ಲಿ ಗಲಭೆ ಸೃಷ್ಠಿಸುವ ದುರುದ್ಧೇಶದಿಂದ ಮತ್ತು ಪವಿತ್ರ ಇಸ್ಲಾಂ ಧರ್ಮಿಯ ಮುಸ್ಲಿಂ ಸಮುದಾಯಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ಸಚಿವ ಜಮೀರ್‌ಅಹ್ಮದ್ ಖಾನ್ ಕೂಡ ಸಂವಿಧಾನಾತ್ಮಕ ಪದವಿಯಲ್ಲಿದ್ದು, ಅವರನ್ನೂ ಹಿಯ್ಯಳಿಸಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡಿ ಮಾನಸಿಕವಾಗಿ ನೋವನ್ನುಂಟು ಮಾಡಿದ್ದಾರೆ. ಈ ಕುರಿತ ವಿಡಿಯೋ ಹರಿದಾಡುತ್ತಿದೆ. ಅದನ್ನಾಧರಿಸಿ ದೂರು ನೀಡುತ್ತಿರುವುದಾಗಿ ಪರಸುರಾಮ ದೂರಿನಲ್ಲಿ ತಿಳಿಸಿದ್ದಾರೆ.
*