ವಿಜಯಪುರ ಜಿಲ್ಲಾಡಳಿತಕ್ಕೆ ರಾಷ್ಟ್ರೀಯ ಬಂಜಾರಾ ಪರಿಷದ್ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಕಾಶ ಚವಾಣ್ ನೇತೃತ್ವ ಮನವಿ ಸಲ್ಲಿಸಲಾಯಿತು. ರಜಾಕಸಾಬ ಮಕಾನದಾರ ಮತ್ತಿತರರ ಮುಖಂಡರಿದ್ದಾರೆ.  
ಜಿಲ್ಲೆ

ಬಂಜಾರಾ ಸಮುದಾಯದ ಅವಹೇಳನ, ಅಥರ್ಗಾ ಗ್ರಾಮಲೆಕ್ಕಾಧಿಕಾರಿ ಮೇಲೆ ಕ್ರಮಕ್ಕೆ ಆಗ್ರಹ

ವಿಜಯಪುರ: ಲಂಬಾಣಿ ಸಮುದಾಯದ ರೈತನಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ ಜಾತಿ ನಿಂದನೆ ಮಾಡಿ ಸಮುದಾಯವನ್ನು ಅವಹೇಳನ ಮಾಡಿದ ಅಥರ್ಗಾ ಗ್ರಾಮ ಲೆಕ್ಕಾಧಿಕಾರಿಯನ್ನು ಕೂಡಲೇ ಅಮಾನತ್ತುಗೊಳಿಸಲು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರೈತರ ಸಂಘ, ಜೈ ಜವಾನ್-ಜೈಕಿಸಾನ್ ಜೈ ಭಾರತ ಮಾತೆ ಜಿಲ್ಲಾ ಘಟಕದ ವತಿಯಿಂದ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ಪ್ರತಿಭಟನೆ ನಡೆಯಿತು. ಬಳಿಕ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನೇತೃತ್ವ ವಹಿಸಿದ್ದ ಮೋತಿರಾಮ ಚವಾಣ್ ಮಾತನಾಡಿ, ಜು. 27 ರಂದು ಅಥರ್ಗಾ ರಾಮತೀರ್ಥ ತಾಂಡಾದ ರೈತ ರವಿ ರಾಠೋಡ ಇವರನ್ನು ಅಥರ್ಗಾ ಗ್ರಾಮ ಲೆಕ್ಕಧಿಕಾರಿ ಯುವರಾಜ ನಿಂಬರಗಿ ಅವಾಚ್ಯ ಪದಗಳಿಂದ ಬೈಯ್ದು ಲಂಬಾಣಿ ಜಾತಿಯನ್ನು ನಿಂದಿಸಿದ್ದಾರೆ. ಅವರ ಮೇಲೆ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಪ್ರಕಾಶ ಚವಾಣ್ ನೇತೃತ್ವ ಪ್ರತಿಭಟನೆ

ಬಿಜೆಪಿ ಎಸ್‌ಸಿ ಮೋರ್ಚಾ, ವಿಜಯಪುರ ನಗರ ಮಂಡಲ ಹಾಗೂ ರಾಷ್ಟ್ರೀಯ ಬಂಜಾರಾ ಪರಿಷದ್ ಯುವ ಘಟಕದ ರಾಜ್ಯಾಧ್ಯಕ್ಷ ಪ್ರಕಾಶ ಚವಾಣ್ ನೇತೃತ್ವದಲ್ಲಿ ಸಹ ಪ್ರತಿಭಟನೆ ನಡೆಯಿತು.

ಅಥರ್ಗಾ ಗ್ರಾಮ ಲೆಕ್ಕಾಧಿಕಾರಿ ಯುವರಾಜ ನಿಂಬರಗಿ ಕಾಗದ ಪತ್ರದ ವಿಷಯಕ್ಕಾಗಿ ರವಿ ರಾಠೋಡಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಬಂಜಾರಾ ಸಮುದಾಯಕ್ಕೆ ಅವಮಾನಿಸಿದ್ದಾರೆ. ಕೂಡಲೇ ಅವರನ್ನು ಅಮಾನತ್ತುಗೊಳಿಸಬೇಕೆಂದು ಪ್ರಕಾಶ ಚವಾಣ್ ಆಗ್ರಹಿಸಿದರು.
ಮುಖಂಡರಾದ ರಜಾಕಸಾಬ ಮಕಾನದಾರ, ಪ್ರಕಾಶ ಚವಾಣ್, ಗೋಪಾಲ ಪೂಜಾರಿ, ಅನಿಲ ನಾಯಕ ಮತ್ತಿತರರಿದ್ದರು.