ಚಿಕ್ಕಬಳ್ಳಾಪುರ: ಭಾರತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆತದ ಅಮಾನುಷ ಪ್ರಕರಣವನ್ನು ಖಂಡಿಸಿ, ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ಕೈಗೊಂಡವು.
ಪ್ರತಿಕೃತಿ ದಹನ ರಸ್ತೆ ತಡೆ, ಮಾನವ ಸರಪಳಿ ನಿರ್ಮಾಣ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ, ಪ್ರತಿಭಟನಾ ಮೆರವಣಿಗೆಯ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು. ಮುಖ್ಯ ನ್ಯಾಯಮೂರ್ತಿಗಳತ್ತ ಶೂ ಎಸೆತವು ಭಾರತದ ಸಂವಿಧಾನದ ಮೇಲಿನ ದಾಳಿ. ಕೂಡಲೇ ಆರೋಪಿ ರಾಕೇಶ್ ಕಿಶೋರ್ ವಿರುದ್ಧ ನಿದಾರ್ಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಹಾಗೆಯೇ ಪ್ರಕರಣವನ್ನು ಸರ್ಮಥಿಸಿಕೊಳ್ಳುವವರಿಗೂ ಕಾನೂನು ನಿಯಮಾನುಸಾರ ಸೂಕ್ತ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
*ಸಂವಿಧಾನಕ್ಕೆ ಅಪಚಾರ
ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟಿಸಿದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೆ.ಸಿ.ರಾಜಾಕಾಂತ್, ಜಾತಿಯ ಅಸಮಾನತೆ ಹಾಗೂ ಅಸಹನೆ ಸಂವಿಧಾನ ಜಾರಿಗೊಂಡು ದಶಕಗಳೇ ಕಳೆದರೂ ಮನುವಾದಿಗಳ ಮನಸ್ಸಿನಲ್ಲಿ ಭದ್ರವಾಗಿ ಉಳಿದುಕೊಂಡಿದೆ ಎಂಬುದಕ್ಕೆ ಈ ಪ್ರಕರಣವು ಸಾಕ್ಷಿ. ದಲಿತ ಎಂಬ ಕಾರಣಕ್ಕೆ ಗವಾಯಿ ಮೇಲೆ ಕೋಮುವಾದಿ ವಕೀಲ ರಾಕೇಶ್ ಕಿಶೋರ್ ಶೂ ಎಸೆದು ನ್ಯಾಯಾಂಗ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಮಾಡಿರುವ ಅಪಚಾರವಾಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ದಸಂಸ ಸಂಚಾಲಕರಾದ ಸಿ.ಜಿ.ಗಂಗಪ್ಪ, ಬಿ.ವಿ.ವೆಂಕಟರಮಣ, ಎನ್.ವೆಂಕಟೇಶ್, ಪರಮೇಶ್, ನರಸಿಂಹಮೂರ್ತಿ, ಪೈಪಾಳ್ಯ ಮೂರ್ತಿ, ತಿರುಮಳ್ಳಪ್ಪ, ಶ್ರೀರಂಗಪ್ಪ ಮತ್ತಿತರರು ಭಾಗವಹಿಸಿದ್ದರು.
*ವಕೀಲನ ಪ್ರತಿಕೃತಿ ದಹನ
ನಗರದ ಅಂಬೇಡ್ಕರ್ ಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಕಾರ್ಯಕರ್ತರು, ಆರೋಪಿ ವಕೀಲ ರಾಕೇಶ್ ಕಿಶೋರ್ ಪ್ರತಿಕೃತಿ ದಹಿಸಿದರು.
ಸೇನೆಯ ರಾಜ್ಯಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ ಮಾತನಾಡಿ, ಕಿಡಿಗೇಡಿಯನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ರಶ್ಮಿ ಅವರ ಮೂಲಕ ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ವೈ.ಶಂಕರ್, ವೈ.ಜೆ.ನರಸಿಂಹಮೂರ್ತಿ, ತಿಮ್ಮರಾಜು, ಸುರೇಶ್, ಎಸ್.ಬಿ.ಮಂಜುನಾಥ್, ಎನ್.ಬಾಲಕೃಷ್ಣ, ರಾಜು, ಜಗದೀಶ್, ಎನ್.ನಾರಾಯಣಸ್ವಾಮಿ, ದೇವದಾಸ್, ಟಿ.ಬಾಲಯ್ಯ, ರೂಪ, ನಾಗರತ್ನಮ್ಮ, ಜ್ಯೋತಿ, ಗಂಗಲಕ್ಷ್ಮಮ್ಮ ಇದ್ದರು.