ಜಿಲ್ಲೆ

ಪಟ್ಟಾ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚನೆ

ಹಾನಗಲ್ಲ: ತಾಲೂಕಿನಲ್ಲಿ 91 ಹೊಸ ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳ ಘೋಷಣೆಗೆ ವಿಳಂಬವಾಗದಂತೆ ತಾಲೂಕು ಆಡಳಿತ ಕೆಲಸ ನಿರ್ವಹಿಸಬೇಕು. ಇನ್ನೂ 31 ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳ ಘೋಷಣೆಗೆ ಪ್ರಸ್ತಾವನೆ ಇದ್ದು ಕೂಡಲೇ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚನೆ ನೀಡಿದರು.

ತಾಪಂ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ ಹಾಗೂ ಪಿಡಿಒಗಳ ಸಭೆ ನಡೆಸಿ, ತಾಲೂಕಿನಲ್ಲಿ 10 ಸಾವಿರ ಮನೆಗಳ ಮಾಲೀಕರಿಗೆ ಪಟ್ಟಾ ವಿತರಿಸಬೇಕಿದೆ. ಜುಲೈ 15ರೊಳಗೆ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗೆ ತಾಪಂ ಇಒ ಹಾಗೂ ತಹಸೀಲ್ದಾರರು ಜವಾಬ್ದಾರಿವಹಿಸಬೇಕು. ಆಗಸ್ಟ್ 15ರಂದು ಫಲಾನುಭವಿಗಳಿಗೆ ಪಟ್ಟಾ ವಿತರಿಸಲು ಎಲ್ಲ ಸಿದ್ಧತೆ ಪೂರ್ಣಗೊಳಿಸಬೇಕಿದೆ. ಕಂದಾಯ ಸಚಿವರ ಅನುಮೋದನೆಯೂ ಒಳಗೊಂಡು ಈ ಎಲ್ಲ ಕಾರ್ಯಗಳು ನಡೆಯಬೇಕಾಗಿದೆ. ತಾಲೂಕಿನ 50 ಸಾವಿರ ಜನರಿಗೆ ವಸತಿಯನ್ನು ಕಾನೂನುಬದ್ಧಗೊಳಿಸಿದಂತಾಗುತ್ತದೆ ಎಂದರು.

ಹಲವು ಗ್ರಾಮಗಳಲ್ಲಿ ಈ ಹಿಂದೆ ಪಟ್ಟಾ ನೀಡಿದ್ದಾರೆ. ಆದರೆ, ಫಲಾನುಭವಿಗಳಲ್ಲಿ ಅವು ಇಲ್ಲ. ಕೆಲವೆಡೆ ಸ್ಥಳ ಗುರುತಿಸಿ ಸಮ್ಮತಿ ನೀಡಿದ್ದಾರೆ. ಆದರೆ, ಪಟ್ಟಾ ಇಲ್ಲ. ಕೆಲವರು ಪಟ್ಟಾ ಕಳೆದುಕೊಂಡಿದ್ದಾರೆ. ಕೆಲವೆಡೆ 50 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಅಧಿಕೃತ ಪಟ್ಟಾ ಇಲ್ಲ. ಕೆಲವೆಡೆ ಕೆರೆ ಅಂಗಳದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಆಸ್ತಿ ಹಾಗೂ ಪಟ್ಟಾ ಹೊಂದಾಣಿಕೆ ಆಗುತ್ತಿಲ್ಲ. ದಾಖಲೆಗಳ ಸಮಸ್ಯೆಯಿದೆ. ಹೀಗೆ ಪಟ್ಟಾ ನೀಡಲು ಹತ್ತು ಹಲವು ಸಮಸ್ಯೆಗಳಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಚರ್ಚೆ ನಡೆಸಿದರು.

ಅರಳೇಶ್ವರ, ಹಾವಣಗಿ, ಮಲಗುಂದ, ನರೇಗಲ್ಲ, ಹುಣಶೆಟ್ಟಿಕೊಪ್ಪ, ಕೆಲವರಕೊಪ್ಪ, ಶೀಗಿಹಳ್ಳಿ, ಗೊಂದಿ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ತಾಪಂ ಇಒ ಹಾಗೂ ತಹಸೀಲ್ದಾರರು ಪರಿಶೀಲಿಸಿ ಪರಿಹಾರ ನೀಡಲು ಮುಂದಾಗಬೇಕು ಎಂದರು.

ತಹಸೀಲ್ದಾರ್ ಎಸ್.ರೇಣುಕಾ, ತಾಪಂ ಇಒ ಪರಶುರಾಮ ಪೂಜಾರ, ತಾಲೂಕಿನ 42 ಪಿಡಿಒಗಳು, ಗ್ರಾಮ ಆಡಳಿತ ಅಧಿಕಾರಿಗಳು ಸಭೆಯಲ್ಲಿದ್ದರು.