ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟಿಗೆ ತಹಸೀಲ್ದಾರ್ ಅಶೋಕ ಶಿಗ್ಗಾವಿ ಬರೆದ ಪತ್ರ. 
ಜಿಲ್ಲೆ

ನಿವೇಶನಗಳ ಸ್ಪಷ್ಟ ವರದಿ ಸಲ್ಲಿಸುವಂತೆ ಸೂಚನೆ

ಗಾಯತ್ರಿ ಮಾಲಿಪಾಟೀಲ್

ಕುಷ್ಟಗಿ: ಲೇಔಟ್‌ಗಳನ್ನು ನಿಯಮಾನುಸಾರ ಅಭಿವೃದ್ಧಿಗೊಳಿಸದೆ ಶೇ.100 ನಿವೇಶನಗಳಿಗೆ ಖಾತಾ ಉತಾರ್ ನೀಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ಸ್ಪಷ್ಟ ವರದಿ ಸಲ್ಲಿಸುವಂತೆ ತಹಸೀಲ್ದಾರ್ ಅಶೋಕ ಶಿಗ್ಗಾವಿ ಅವರು ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟಿಗೆ ಬುಧವಾರ ಪತ್ರ ಬರೆದಿದ್ದಾರೆ.

ಪಟ್ಟಣದಲ್ಲಿ ತಲೆ ಎತ್ತುತ್ತಿರುವ ಲೇಔಟ್‌ಗಳ ಕುರಿತು ‘ಮನೆಗಳಿಗಿಂತ ನಿವೇಶನಗಳೇ ಹೆಚ್ಚು’ ಶೀರ್ಷಿಕೆ ಅಡಿ ಫೆ.5ರಂದು ವಿಜಯವಾಣಿ ಪ್ರಕಟಿಸಲಾಗಿತ್ತು. ಈ ವರದಿ ಉಲ್ಲೇಖಿಸಿ ಫೆ.28ರಂದು ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದ್ದ ತಹಸೀಲ್ದಾರ್ ಭೂ ಪರಿವರ್ತಿತ ಜಮೀನಿನಲ್ಲಿ ನಾಗರಿಕ ಸೌಲಭ್ಯಗಳಾದ ವಿದ್ಯುತ್, ನೀರು, ಒಳಚರಂಡಿ ಹಾಗೂ ಮೂಲ ಸೌಕರ್ಯಗಳ ಜತೆ ಕಾನೂನು ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮವಿದೆ. ಆದರೆ, ಯಾವುದೇ ಮೂಲ ಸೌಕರ್ಯ ಇಲ್ಲದಿದ್ದರೂ ಶೇ.100 ನಿವೇಶನಗಳಿಗೆ ಖಾತಾ ಉತಾರ್ ನೀಡುತ್ತಿರುವ ಬಗ್ಗೆ ಹಾಗೂ ಅಂಥ ಆಸ್ತಿಗಳಿಗೆ ಸಂಬಂಧಿಸಿದ ವಸತಿ ವಿನ್ಯಾಸದ ಆದೇಶ ರದ್ದುಪಡಿಸಿ ಖಾತಾ ಉತಾರ್ ನೀಡುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಪತ್ರ ಬರೆದರೂ ಉದಾಸೀನ ಮಾಡುತ್ತಿದ್ದೀರಿ ಎನ್ನುವುದು ಗೊತ್ತಾಗಿದೆ. ಸಾರ್ವಜನಿಕರು ಸಲ್ಲಿಸಿದ ದೂರಿನಲ್ಲಿ ತಿಳಿಸಿರುವಂತೆ ಸರ್ವೇ ನಂ.453/2, 221/2 ಹಾಗೂ 168/7ರಲ್ಲಿ ನಿರ್ಮಿಸುತ್ತಿರುವ ಲೇಔಟ್‌ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನೊಟೀಸ್‌ನಲ್ಲಿ ತಿಳಿಸಿದ್ದರು. ಅದರಂತೆ ಸರ್ವೇ ನಂ.453/2ರಲ್ಲಿನ ಲೇಔಟ್‌ಗೆ ಸಂಬಂಧಿಸಿದಂತೆ ಶೇ.60 ನಿವೇಶನಗಳ ಮಾರಾಟ ತಡೆಹಿಡಿದು ಪುರಸಭೆ ಮುಖ್ಯಾಧಿಕಾರಿ ಮಾ.7ರಂದು ಆದೇಶ ಹೊರಡಿಸಿದ್ದರು. ಅದೇ ರೀತಿ ಸರ್ವೇ ನಂ.221/2 ಹಾಗೂ 168/7ರಲ್ಲಿನ ಲೇಔಟ್‌ಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ಸ್ಪಷ್ಟ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.