ಹುಬ್ಬಳ್ಳಿ: ಇಲ್ಲಿಯ ಹಳೇ ಹುಬ್ಬಳ್ಳಿಯ ನೇಕಾರ ನಗರ ಬಳಿ ಹಾದು ಹೋಗಿರುವ ಷಟ್ಪಥ ರಸ್ತೆಯನ್ನು ಶಾಸಕ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರು ಶನಿವಾರ ಪರಿಶೀಲಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ದಿವ್ಯಪ್ರಭು, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರನ್ನು ಕರೆಯಿಸಿದ ಶಾಸಕರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಹಲವು ಕಟ್ಟಡಗಳು ನೆಲಸಮವಾಗುತ್ತವೆ. ಇದರ ಹೊರತಾಗಿ ಮುಂದಿನ ಪ್ರದೇಶ ಅಭಿವೃದ್ಧಿಪಡಿಸಲು ಬೇಕಾದ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು. ಯಾಕೆಂದರೆ ಮೊದಲಿದ್ದ ರಸ್ತೆಯೊಳಗೆ ಈ ಯೋಜನೆ ಸೇರಿಸಿಲ್ಲ. ಮುಂದೆ ಮಾರುಕಟ್ಟೆ ಸೇರಿ ಇತರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಉದ್ದೇಶವಿದೆ ಎಂದರು.
ಮಾರುಕಟ್ಟೆ ವ್ಯಾಪ್ತಿಗೆ ಬರುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಪರಿಶೀಲಿಸಿ ವರದಿ ಕೊಡಬೇಕು. ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅನುದಾನ ಪಡೆಯಲಾಗುವುದು ಎಂದು ಅಧಿಕಾರಿಗಳ ಮುಂದೆ ಶಾಸಕರು ವಿವರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಮಾರುಕಟ್ಟೆಯಲ್ಲಿ ಓಡಾಡಲು ಜಾಗವಿಲ್ಲ. ಹಳೇ ಹುಬ್ಬಳ್ಳಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ 2-3 ತಿಂಗಳ ಹಿಂದೆ ಸಿದ್ಧವಾಗಿದೆ. ಇನ್ನಷ್ಟು ನಗರದ ವೃತ್ತಗಳನ್ನು ವಿಸ್ತರಣೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನಗರಾಭಿವೃದ್ಧಿ ಇಲಾಖೆಯಿಂದ ಅನುದಾನ ಬಂದಿದೆ. ಕೆಲವೆಡೆ ಡಬಲ್ ರೋಡ್ ಮಾಡುವ ಅಗತ್ಯವಿದೆ. ಇದೆಲ್ಲದರ ವರದಿ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಅನುದಾನ ಬಿಡುಗಡೆಗೆ ಕೋರಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಪರಿಹಾರ ಕೊಡುವ ವಿಷಯ ನನೆಗುದಿ ಇರುವುದು ಗಮನಕ್ಕೆ ಇದೆ. ಬಹಳಷ್ಟು ನಮ್ಮ ಜಾಗವಿದು ಎನ್ನುತ್ತಿದ್ದಾರೆ. ಮೂಲ ಮಾಲೀಕರು ಮುಂದೆ ಅಪಸ್ವರ ಎತ್ತಬಾರದು ಎನ್ನುವುದು ನಮ್ಮ ಅಭಿಪ್ರಾಯ. ಎಲ್ಲ ರೀತಿಯ ಪರಿಶೀಲನೆ ನಡೆಸಿದ ಬಳಿಕ ಪರಿಹಾರ ಕೊಡಲು ತೀರ್ಮಾನಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರಿಹಾರ ಬೇರೆ ಬೇರೆ ಇದೆ ಎಂದರು.
ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಪಾಲಿಕೆ ಎಸ್‌ಇ ಆರ್. ವಿಜಯಕುಮಾರ, ಪಾಲಿಕೆ ಸದಸ್ಯೆ ಶಾಂತಕ್ಕ ಹಿರೇಮಠ, ರಾಜಶೇಖರ ಮೆಣಸಿನಕಾಯಿ ಇತರರು ಇದ್ದರು.