ಜಿಲ್ಲೆ

ವಿದ್ಯುತ್ ಸಮಸ್ಯೆಗೆ ತಕ್ಷಣ ಸ್ಪಂದಿಸಲು ಸೂಚನೆ

ವಿವೇಕಾನಂದ ದಾಸನಕೊಪ್ಪ

ಕುಂದಗೋಳ: ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ತಂತಿ, ಕಂಬ ಮುರಿದು ಬೀಳುವ ಘಟನೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಬೆಂತೂರ ಸೂಚನೆ ನೀಡಿದರು.

ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಲೈನ್‌ಮನ್‌ಗಳ ಕಾರ್ಯ ಶ್ಲಾಘನೀಯವಾಗಿದೆ. ಯಾವುದೇ ಸಿಬ್ಬಂದಿ ಕೊರತೆ ಇದ್ದರೂ ತುರ್ತು ಕಾರ್ಯಗಳಲ್ಲಿ ವಿಳಂಬವಾಗದಂತೆ ಕಾರ್ಯಾಚರಣೆಗೆ ಒತ್ತು ಕೊಡಬೇಕು ಎಂದರು.

ಭರದ್ವಾಡ ಗ್ರಾಮದ ಲೈನ್‌ಮನ್ ಸಂಬಂಧಿತ ದೂರುಗಳು ಹೆಚ್ಚಾಗಿದ್ದು, ಕಾರ್ಯವೈಖರಿ ಸುಧಾರಿಸಲು, ಹರ್ಲಾಪೂರ ಎಸ್‌ಸಿ ಕಾಲನಿಯಲ್ಲಿ ಭಾಗಗೊಂಡ ವಿದ್ಯುತ್ ಕಂಬದ ಸಮಸ್ಯೆ ತ್ವರಿತವಾಗಿ ಬಗೆಹರಿಸಲು ಸೂಚನೆ ನೀಡಿದರು.

ಹೆಸ್ಕಾಂ ಅಧಿಕಾರಿ ವೀರೇಶ ಮಠದ ಅವರು ಸಿಬ್ಬಂದಿ ಕೊರತೆ ಹಾಗೂ ಸಾಮಗ್ರಿಗಳ ತೊಂದರೆ ಬಗ್ಗೆ ವಿವರಿಸಿದರು. ಲ್ಯಾಡರ್‌ವಾಹನ, ಹಗ್ಗ, ಹಾರಿ ಮೊದಲಾದ ಅವಶ್ಯಕ ಸಾಮಗ್ರಿ ಪೂರೈಸಬೇಕು ಎಂದು ಕೋರಿದರು.

ತಾಪಂ ಇಒ ಜಗದೀಶ ಕಮ್ಮಾರ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶಶಿಧರ ಸೋಮರಡ್ಡಿ, ಅಡಿವೆಪ್ಪ ಹೆಬಸೂರ, ಶರಣಪ್ಪ ಅಂಗಡಿ, ಸಿದ್ದಲಿಂಗೇಶ ಬುಳ್ಳಾ, ಮಲ್ಲಿಕಾರ್ಜುನ ಮಾನೆದ, ವಿನಾಯಕ ಚೌರಡ್ಡಿ, ರಂಗನಾಥ ಗುಡಿಹಿಂದಿನ, ಹನುಮಂತಪ್ಪ ವಡ್ಡರ, ವಿವೇಕಾನಂದ ಪೂಜಾರ, ಶ್ರೀಧರ ಚಿಪ್ಪಲಕಟ್ಟಿ, ಸೋಮಲಿಂಗ ಕೊಡಬೇಳಿ, ಮಂಜು ನಾಯ್ಕ, ಶಬ್ಬಿ ಕೊಲಕಾರ, ಪ್ರಶಾಂತ ಚಲವಾದಿ, ಪ್ರಶಾಂತ ಕಾಂಬಳೆ ಇತರರಿದ್ದರು.