ಜಿಲ್ಲೆ

ಅವಘಡ ಆಗದಂತೆ ಎಚ್ಚರ ವಹಿಸಲು ಸೂಚನೆ

ಬಸವರಾಜ ವೀರಪ್ಪ ಗರಗ

ಹಿರೇಕೆರೂರ: ತಾಲೂಕಿನ ಹಂಸಭಾವಿ ಗ್ರಾಮದ ಮೃತ್ಯುಂಜಯ ವಿದ್ಯಾಪೀಠ ಸಂಸ್ಥೆಯ ಶಿವಯೋಗೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ತೆಂಗಿನಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಶಾಲೆಯ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈಲಾ ಜಿ. ಕುರಹಟ್ಟಿ ಅವರು ಸೋಮವಾರ ಭೇಟಿ ನೀಡಿ ಸ್ಥಳ ಪರೀಶೀಲನೆ ನಡೆಸಿದರು.

ನಂತರ ಶಾಲಾ ಸಂಸ್ಥೆ ಅಧಿಕಾರಿಯಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಮುಂದೆ ಹೀಗೆ ಆಗದಂತೆ ಶಾಲೆ ಆಡಳಿತ ಮಂಡಳಿಗೆ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಎಚ್ಚರಿಕೆ ಸೂಚನೆ ನೀಡಿದರು. ಶಾಲಾ, ಕಾಲೇಜಿನ ಆವರಣದಲ್ಲಿ ಯಾವುದೆ ಹೈ ವೋಲ್ಟೇಜ್ ತಂತಿ ಅಥವಾ ವಿದ್ಯುತ್ ಪರಿವರ್ತಕ ಇರಬಾರದು. ಒಂದು ವೇಳೆ ಶಾಲಾ-ಕಾಲೇಜು ಆವರಣದಲ್ಲಿ ಇಂತಹ ಪರಿವರ್ತಕ, ಹೈವೋಲ್ಟೇಜ್ ವಿದ್ಯುತ್ ತಂತಿ ಕಂಡು ಬಂದರೆ ಕೂಡಲೆ ಹೆಸ್ಕಾಂ ಸಿಬ್ಬಂದಿಯವರು ತೆಗೆದು ಬೇರೆ ಸ್ಥಳಕ್ಕೆ ವರ್ಗಾಯಿಸಬೇಕು ಎಂದರು. ನಂತರ ಮೃತಪಟ್ಟ ವಿದ್ಯಾರ್ಥಿ ಮನೆಗೆ ಹಾಗೂ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಪಾಲಕರಿಗೆ ಸಾಂತ್ವನ ಹೇಳಿದರು.

ಮೃತಪಟ್ಟ ವಿದ್ಯಾರ್ಥಿಗೆ ಶಿಕ್ಷಣ ಇಲಾಖೆಯಿಂದ 1.25 ಲಕ್ಷ ರೂ. ಹಾಗೂ ರಾಜ್ಯ ಮಕ್ಕಳ ರಕ್ಷಣಾ ಆಯೋಗದಿಂದ ಪ್ರತಿ ತಿಂಗಳು ನಾಲ್ಕು ಸಾವಿರ ರೂ.ಗಳಂತೆ ಒಂದು ವರ್ಷಕ್ಕೆ 48 ಸಾವಿರ ರೂ. ಇಲಾಖೆಯಿಂದ ಕೊಡಿಸುವುದಾಗಿ ಹೇಳಿದರು.

ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಶೈಲಾ ಜಿ. ಕುರಹಟ್ಟಿ, ಸಿಬ್ಬಂದಿ ವಿನಯ ಗುಡುಗೂರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್., ಮೃತ್ಯುಂಜಯ ವಿದ್ಯಾಪೀಠದ ಆಡಳಿತಾಧಿಕಾರಿ ಸತೀಶ ಕಬ್ಬಿಣದ, ಸ್ಥಳಿಯ ಪೊಲೀಸ್ ಅಧಿಕಾರಿ ಮಾಳಪ್ಪ ಚಿಪಲಕಟ್ಟಿ, ತಾಲೂಕು ಹೆಸ್ಕಾಂ ಅಧಿಕಾರಿ ಹಾಗೂ ಗ್ರಾಮಸ್ಥರು ಇದ್ದರು.