ವಿಜಯಪುರ: ಬಾಲ್ಯವಿವಾಹ ತಡೆಗಟ್ಟುವಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಹೇಳಿದರು.
ಸೋಮವಾರ ಸಂಜೆ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಹಾಗು ತಾಲೂಕು ಮಟ್ಟದಲ್ಲಿ ಅರಿವು ಹಾಗೂ ಅಭಿಯಾನ ಕಾರ್ಯಕ್ರಮ ವ್ಯವಸ್ಥಿತವಾಗಿ ಹಮ್ಮಿಕೊಳ್ಳಬೇಕು.ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣರಲ್ಲಿ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯ ಕೆರೆಗಳ ಸರ್ವೇ ಕಾರ್ಯ 3 ತಿಂಗಳೊಳಗೆ ಪೂರ್ಣಗೊಳಿಸಬೇಕು. ಪಂಚಾಯಿತಿ ರಾಜ್ ಇಂಜಿನಿಯರಿಂಗ್ ವಿಭಾಗ, ಸಣ್ಣ ನೀರಾವರಿ ಹಾಗೂ ಕಂದಾಯ ಇಲಾಖೆ ಈ ಸರ್ವೆ ಕಾರ್ಯದಲ್ಲಿ ಜಂಟಿಯಾಗಿ ನಿರ್ವಹಿಸಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ಮುಂಜಾಗೃತೆ ಕ್ರಮ ವಹಿಸಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಪಿಡಿಒಗಳ ಜವಾಬ್ದಾರಿ ಬಹುದೊಡ್ಡದಾಗಿದ್ದು, ಈ ಬಗ್ಗೆ ನೀರು ಸಂಗ್ರಹ ಘಟಕಗಳನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಈ ಕಾರ್ಯ ನಿರಂತರವಾಗಿ ನಿರ್ವಹಿಸಬೇಕು. ಕಲುಷಿತ ನೀರು ಸೇವನೆಯಿಂದ ಅವಘಡಗಳು ಸಂಭವಿ ಸದಂತೆ ಎಚ್ಚರಿಕೆ ವಹಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಮಟ್ಟದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಬೇಕು. ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯವನ್ನು ಆದ್ಯತೆ ಮೇಲೆ ಕೈಗೊಂಡು ಜಾಗ ಗುರುತಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಅಂಗನವಾಡಿ ಕೇಂದ್ರ ಹೊಂದಲು ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ಸೂಕ್ತ ಜಾಗ ಗುರುತಿಸಬೇಕು ಎಂದರು.
ನಿಡಗುಂದಿ ವಸತಿ ನಿಲಯಕ್ಕೆ ಭೇಟಿ ನೀಡಿದಾಗ, ವಸತಿ ನಿಲಯಗಳಲ್ಲಿ ಕಲ್ಪಿಸಲಾಗಿರುವ ಎಲ್ಲ ಮೂಲ ಸೌಕರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಸತಿ ನಿಲಯಗಳಲ್ಲಿ ಅಳವಡಿಸಿರುವ ಕಂಪ್ಯೂಟರ್‌ಗಳನ್ನು ಮಕ್ಕಳ ಬಳಕೆಗೆ ಒದಗಿಸಬೇಕು. ನಿಲಯ ಮೇಲ್ವಿಚಾರಕರು ಪ್ರತಿ ವಾರಕ್ಕೆ ಎರಡು ದಿನ ಕಂಪ್ಯೂಟರ್ ತರಬೇತಿ ನೀಡುವಂತೆ ಸೂಚಿಸಬೇಕು. ನಿಲಯದ ವಿದ್ಯಾರ್ಥಿಗಳು ಗ್ರಂಥಾಲಯದ ಉಪಯೋಗ ಪಡೆದುಕೊಳ್ಳಲು ತಿಳಿಸಬೇಕು ಎಂದರು.
ಬಿತ್ತನೆ ಬೀಜದ ಕೊರತೆ ಇಲ್ಲ: ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕ್ಷೇತ್ರ 736794 ಹೆಕ್ಟೇರ್ ಪ್ರದೇಶದ ಗುರಿ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ ತೊಗರಿ, ಹೆಸರು, ಉದ್ದು, ಮುಸುಕಿನ ಜೋಳ, ಸೂರ್ಯಕಾಂತಿ, ಸಜ್ಜೆ ಹಾಗೂ ಕಬ್ಬು ಮುಖ್ಯ ಬೆಳೆಗಳಾಗಿದ್ದು, ಇಲ್ಲಿಯವರೆಗೆ 593049 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಬಿತ್ತನೆ ಬೀಜ 870.59 ಕ್ವಿಂಟಲ್ ಮತ್ತು ರಸಗೊಬ್ಬರ 58894 ಮೆಟ್ರಿಕ್ ಟನ್ ದಾಸ್ತಾ ನು ಇದೆ. ಸದ್ಯಕ್ಕೆ ಯಾವುದೇ ಕೊರತೆಯಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಸಭೆಗೆ ಮಾಹಿತಿ ನೀಡಿದರು.
ಜಿಪಂ ಸಿಇಒ ರಾಹುಲ್ ಶಿಂಧೆ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಅಪರ ಡಿಸಿ ಶಂಕರ ಮಾರಿಹಾಳ, ಅಪರ ಡಿಸಿ ಮಹಾದೇವ ಮುರುಗಿ, ಇಂಡಿ ಎಸಿ ಅಬೀದ್ ಗದ್ಯಾಳ, ನಗರಾಭಿವೃದ್ಧಿ ಕೋಶದ ವಿಜಯಕುಮಾರ ಮೆಕ್ಕಳಕಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.