ಕೆ.ಎಂ.ಪಂಕಜ ಬೆಂಗಳೂರು
ತಂತ್ರಜ್ಞಾನ ಆಧಾರಿತ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿ ಹೊಂದುತ್ತಿದ್ದು, ಇದೀಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ನೆಫ್ರೋಯುರಾಲಜಿ ಸಂಸ್ಥೆ ರೋಬಾಟಿಕ್ ಯಂತ್ರ ಅಳವಡಿಕೆಗೆ ಸಜ್ಜಾಗುತ್ತಿದೆ. ಇದರೊಂದಿಗೆ ಬಡ ಹಾಗೂ ಮಧ್ಯಮವರ್ಗದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಹೈಟೆಕ್ ಚಿಕಿತ್ಸೆ ದೊರೆಯಲಿದೆ.
ಮೂತ್ರಪಿಂಡ ಕಸಿ, ಕ್ಯಾನ್ಸರ್ ಹಾಗೂ ಮೂತ್ರಕೋಶ ಸಮಸ್ಯೆಗೆ ಒಳಗಾದವರಿಗೆ ಸುಲಭ ಹಾಗೂ ನಿಖರ ಶಸಚಿಕಿತ್ಸೆ ನಡೆಸಲು ಹಾಗೂ ರೋಗಿಗಳು ಶೀಘ್ರ ಚೇತರಿಕೆ ಹೊಂದಲು ರೋಬಾಟಿಕ್ ಸಹಕಾರಿಯಾಗಲಿದೆ. ಈ ಯಂತ್ರ ಅಳವಡಿಕೆಗೆ 20 ಕೋಟಿ ರೂ. ವೆಚ್ಚವಾಗಲಿದ್ದು, ಸಂಸ್ಥೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಅನುಮತಿ ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ರೋಬಾಟಿಕ್ ಶಸ್ತ್ರಚಿಕಿತ್ಸೆ ಹೆಚ್ಚು ನಿಖರ ಹಾಗೂ ಪರಿಣಾಮಕಾರಿ ಆಗಿದೆ. ಇದರಿಂದ ಕಡಿಮೆ ರಕ್ತಸ್ರಾವದೊಂದಿಗೆ ಅಲ್ಪಾವಧಿಯಲ್ಲಿ ಶಸಚಿಕಿತ್ಸೆ ನಡೆಸಬಹುದಾಗಿದ್ದು, ರೋಗಿಯ ಆಸ್ಪತ್ರೆ ವಾಸವೂ ಕಡಿಮೆಯಾಗಿ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕ ಡಾ. ಆರ್. ಕೇಶವಮೂರ್ತಿ.
ಹಳೇ ಕಟ್ಟಡದಲ್ಲೇ ಯಂತ್ರ ಅಳವಡಿಕೆ: ರೋಬಾಟಿಕ್ ಅಳವಡಿಕೆಗೆ ಪ್ರತ್ಯೇಕ ನಿರ್ಮಾಣ ಕಾಮಗಾರಿಯ ಅಗತ್ಯವಿಲ್ಲ. ಈಗಿರುವ ಕಟ್ಟಡವೇ ಸಾಕು. ಸಂಸ್ಥೆಯು 160 ಹಾಸಿಗೆಗಳನ್ನು ಹೊಂದಿದ್ದು, ಆಧುನಿಕ ಅರಿವಳಿಕೆ ಉಪಕರಣಗಳನ್ನು ಒಳಗೊಂಡ ನಾಲ್ಕು ದೊಡ್ಡ ಶಸ್ತ್ರಚಿಕಿತ್ಸೆ ಕೊಠಡಿ ಹಾಗೂ ಒಂದು ಚಿಕ್ಕ ಶಸ್ತ್ರಚಿಕಿತ್ಸೆ ಕೊಠಡಿ ಹೊಂದಿದೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಾಗಿ ಎಂಡೊ ಯುರೊಲಜಿಕಲ್ ಉಪಕರಣ ಹಾಗೂ ಸಿ-ಆರ್ಮ್ ಯಂತ್ರಗಳನ್ನು ಒಳಗೊಂಡಿದೆ. ಇದೇ ಘಟಕದಲ್ಲಿ ರೋಬಾಟಿಕ್ ಯಂತ್ರವನ್ನೂ ಅಳವಡಿಸಿ ಸೇವೆ ಒದಗಿಸಲಾಗುವುದು ಎಂದು ಹೇಳಿದರು.
ಪೂರೈಕೆದಾರರಿಂದಲೇ ತರಬೇತಿ: ರೋಬಾಟಿಕ್ ಯಂತ್ರದಿಂದ ಇನ್ನು ಶಸ್ತ್ರಚಿಕಿತ್ಸೆ ಸುಲಭವಾಗಲಿದೆ. ಒಬ್ಬ ವೈದ್ಯರು ಯಂತ್ರದ ಕಾರ್ಯಾಚರಣೆ ಮಾಡಿದರೆ, ಇನ್ನೊಬ್ಬ ಸಹಾಯಕರು ಇರುತ್ತಾರೆ. ಈಗಾಗಲೇ ನಾಲ್ಕೈದು ಕಂಪನಿಗಳು ಯಂತ್ರ ಒದಗಿಸಲು ಮುಂದಾಗಿವೆ. ಆದರೆ ನಿಯಮಾನುಸಾರ ಟೆಂಡರ್ ಕರೆಯಲಾಗುವುದು. ನಂತರದಲ್ಲಿ ಪೂರೈಕೆದಾರರೇ ಯಂತ್ರದ ನಿರ್ವಹಣೆ ಹಾಗೂ ಕಾರ್ಯಾಚರಣೆ ಕುರಿತು ವೈದ್ಯರಿಗೆ ತರಬೇತಿ ನೀಡಲಿದ್ದಾರೆ. ಮೊದಲಿಗೆ ಆರು ಮಂದಿ ತರಬೇತಿ ಪಡೆದು ಶಸಚಿಕಿತ್ಸೆ ನಡೆಸಲಿದ್ದಾರೆ. ಉಳಿದವರೂ ಹಂತ ಹಂತವಾಗಿ ತರಬೇತಿ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಸೇವಾ ವಿವರ: ರಾಜ್ಯ ಸೇರಿ ಹೊರ ರಾಜ್ಯಗಳಿಂದಲೂ ಸಂಸ್ಥೆಗೆ ರೋಗಿಗಳು ಬರುತ್ತಾರೆ. ನಿತ್ಯ 400ಕ್ಕೂ ಅಧಿಕ ಹೊರ ರೋಗಿಗಳು ಆಗಮಿಸುತ್ತಾರೆ. ಮೂತ್ರಪಿಂಡ ಮತ್ತು ಮೂತ್ರಕೋಶ ಸಮಸ್ಯೆಗಳಿಗೆ ಸಂಬಂಧಿಸಿದ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಗೆ ಶಿಫಾರಸು ಆಧಾರದಲ್ಲಿಯೂ ವಿವಿಧ ಆಸ್ಪತ್ರೆಗಳಿಂದ ರೋಗಿಗಳು ದಾಖಲಾಗುತ್ತಾರೆ. ಇದಲ್ಲದೆ ಸಂಸ್ಥೆಯಿಂದ ನಿತ್ಯ 220 ಮಂದಿಗೆ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಪ್ರತಿ ದಿನ 15-20 ಶಸಚಿಕಿತ್ಸೆ ಹಾಗೂ ತಿಂಗಳಿಗೆ 4-5 ಕಿಡ್ನಿ ಕಸಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕಿಡ್ನಿ ಸಮಸ್ಯೆಗೆ ಕಾರಣಗಳು: ಆಹಾರ ಪದ್ಧತಿ ಹಾಗೂ ಬದಲಾದ ಜೀವನ ಶೈಲಿಯಿಂದ ಇಂದು ಮಧುಮೇಹ, ಅಧಿಕ ರಕ್ತದೊತ್ತಡ ಹೆಚ್ಚುತ್ತಿದೆ. ಜೊತೆಗೆ ಸಂಧಿವಾತ (ಅ್ಟಠಿಜ್ಟಜಿಠಿಜಿ)ನಂತಹ ಸಮಸ್ಯೆಯಿಂದ ನೋವು ನಿವಾರಕ ಮಾತ್ರೆಗಳ ಸೇವನೆ ಸೇರಿ ವಿವಿಧ ಕಾರಣಗಳಿಂದ ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಕೋಶ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ಸಂಸ್ಥೆ ಬರುವ ರೋಗಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ 4.21 ಲಕ್ಷ ಮಂದಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಅವಧಿಯಲ್ಲಿ 42 ಸಾವಿರಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಹಾಗೂ 125 ಮಂದಿಗೆ ಮೂತ್ರಪಿಂಡ ಕಸಿ ಮಾಡಲಾಗಿದೆ. ರೋಬಾಟಿಕ್ ಯಂತ್ರ ಅಳವಡಿಕೆಯಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಕೋಟ್
‘‘ ರೋಬಾಟಿಕ್ ಯಂತ್ರ ಅಳವಡಿಕೆ ಸಂಬಂಧಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು. ಇದರೊಂದಿಗೆ ರೋಬಾಟಿಕ್ ಯಂತ್ರ ಅಳವಡಿಸಿಕೊಂಡ ರಾಜ್ಯದ ಎರಡನೇ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಲಿದೆ. ಈ ಯಂತ್ರ ಬಳಸಿ ಕಿಡ್ನಿ ಕಸಿ, ಕ್ಯಾನ್ಸರ ಸೇರಿ ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಆದ್ಯತೆ ಮೇರೆಗೆ ಶಸಚಿಕಿತ್ಸೆ ನಡೆಲಾಗುವುದು.’ - ಡಾ. ಆರ್. ಕೇಶವಮೂರ್ತಿ, ನಿರ್ದೇಶಕರು, ನೆಫ್ರೋಯುರಾಲಜಿ ಸಂಸ್ಥೆ