ಜಿಲ್ಲೆ

ಪ್ರತಿಭಟನೆ ಬದಲು ಕ್ಷಮೆಯಾಚನಾ ಮೆರವಣಿಗೆ ನಡೆಸಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಬಣ ಬಡಿದಾಟ ಹಾಗೂ ದುರಾಡಳಿತದಿಂದ ಈಗಾಗಲೇ ಕುಸಿದು ಬೀಳುವ ಹಂತ ತಲುಪಿರುವ ರಾಜ್ಯ ಸರ್ಕಾರ ತನ್ನ ಮಾನ ಉಳಿಸಿಕೊಳ್ಳಲು ಹಾಗೂ ಜನರ ದಿಕ್ಕು ತಪ್ಪಿಸಲು ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಾಟಕವಾಡುತ್ತಿದೆ. ಆದರೆ ಕೊನೆಗೂ ಕಾಂಗ್ರೆಸ್ಸಿಗರು ಬೆಲೆ ಏರಿಕೆ ಕುರಿತು ಮಾತನಾಡುತ್ತಿರುವುದು ಸಂತಸದ ವಿಚಾರ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಾಲ್ಮೀಕಿ, ಕೆಐಎಡಿಬಿ, ಮುಡಾ, ಅಬಕಾರಿ ಸೇರಿ ಹಗರಣಗಳ ಮೂಲಕ ಹೈಕಮಾಂಡ್​ಗೆ ಕಪ್ಪ ಕಾಣಿಕೆ ಸಲ್ಲಿಸುವುದನ್ನೇ ಉದ್ಯೋಗ ಮಾಡಿಕೊಂಡಿರುವ ಕಾಂಗ್ರೆಸ್ಸಿಗರ ದುರಾಡಳಿತಕ್ಕೆ ಬಲಿಯಾಗಿರುವುದು ಮಾತ್ರ ನಾಡಿನ ಜನತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಹಾಗೂ ಹೈಕಮಾಂಡ್​ ಜೇಬು ತುಂಬಿಸಿಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕುತ್ತಿರುವ ಕಾಂಗ್ರೆಸ್​, ನಿತ್ಯ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಸುತ್ತಲೇ ಬಂದಿದೆ. ಸುಮಾರು 48 ಅಗತ್ಯ ವಸ್ತುಗಳ ಬೆಲೆ ಏರಿಕೆ ಭಾರವನ್ನು ಜನರ ತಲೆ ಮೇಲೆ ಹೊರಿಸಿದ ಕಾಂಗ್ರೆಸ್​, ಪ್ರತಿಭಟನಾ ರ್ಯಾಲಿ ನಡೆಸುವುದರ ಬದಲು ಕ್ಷಮೆಯಾಚನೆ ರ್ಯಾಲಿ ನಡೆಸಿದರೆ ಆ ರ್ಯಾಲಿಗೆ ಅರ್ಥ ಬರುತ್ತಿತ್ತು. ರಾಜ್ಯದ ಜನರು ಪ್ರಬುದ್ಧರಾಗಿದ್ದು, ಕಾಂಗ್ರೆಸ್ಸಿಗರ ಈ ನಾಟಕ ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರಿಗೂ ಅರ್ಥವಾಗುತ್ತದೆ ಎಂದು ಬೆಲ್ಲದ ಕಿಡಿಕಾರಿದ್ದಾರೆ.

ರಾಜಕೀಯ ನಾಟಕ ನಿಲ್ಲಿಸಿ, ಬೆಲೆ ಏರಿಕೆ ಕಡಿಮೆ ಮಾಡುವುದರತ್ತ ಗಮನ ಹರಿಸಿ. ಇಲ್ಲವಾದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ರಾಜ್ಯದ ಜನತೆ ಕೆಳಗಿಳಿಸುವುದು ನಿಶ್ಚಿತ ಎಂದು ಕಾಂಗ್ರೆಸ್ಸಿಗರಿಗೆ ಎಚ್ಚರಿಸಿದ್ದಾರೆ.