ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿ ನಿರ್ಮಿಸಿರುವ ಶ್ರೀ ಕಾಳಿಕಾಂಬ ಅಮ್ಮನವರ ದೇವಸ್ಥಾನದಲ್ಲಿ ಫೆ.16 ಹಾಗೂ 17ರಂದು ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿವೆ.
ಫೆ.16ರಂದು ಸಂಜೆ ಗಂಗಾವರಣ ನಡೆಯಲಿದ್ದು, ಕಾಳಿಕಾಂಬ ದೇವಿಯ ಗ್ರಾಮ ಪ್ರದಕ್ಷಿಣೆ ನಡೆಯಲಿದೆ. ನಂತರ ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹವಾಹನ, ಮಾತೃಕಾರಾಧನೆ, ಗ್ರಹಾರಾಧನೆ, ಅಂಕುರಾರ್ಪಣೆ ಸೇರಿದಂತೆ ಅನೇಕ ಹೋಮ ಹವನಗಳು ನಡೆಯಲಿವೆ. ಹಾಸನ ಜಿಲ್ಲೆ ಅರಕಲಗೂಡು ಅರೇಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಶ್ರೀಶಿವಸುಜ್ಞಾನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.
ಫೆ.17ರಂದು ವೇದಿಕಾರ್ಚನೆ, ತತ್ವನ್ಯಾಸಾದಿ ಹೋಮಗಳು, ಕುಂಭಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಇದಕ್ಕಾಗಿ ದೇಗುಲದ ಮುಂಭಾಗವನ್ನು ಸ್ವಚ್ಛಗೊಳಿಸುವ ಕೆಲಸ, ಹಸಿರು ಚಪ್ಪರ, ತಳಿರು ತೋರಣಗಳಿಂದ ಸಿಂಗರಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಎನ್.ಮಹೇಶ್, ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಾಪಂ ಮಾಜಿ ಸದಸ್ಯೆ ಲಕ್ಷ್ಮೀಈರಣ್ಣ, ಗ್ರಾಪಂ ಅಧ್ಯಕ್ಷೆ ದೊಡ್ಡಮ್ಮ ನಂಜುಂಡಸ್ವಾಮಿ, ಉಪಾಧ್ಯಕ್ಷ ಮಹೇಶ್‌ಉಪ್ಪಾರ್, ದೇಗುಲಕ್ಕೆ ಸ್ಥಳವನ್ನು ದಾನವಾಗಿ ನೀಡಿರುವ ಪರಶಿವಪ್ಪ ಹಾಗೂ ನಾಗಲಿಂಗಾಚಾರ್ಯ ಕುಟುಂಬಸ್ಥರೂ ಸೇರಿದಂತೆ ಅನೇಕ ಮುಖಂಡರು ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.