ಹಳೇಬೀಡು: ಜೈನರಗುತ್ತಿ ಕ್ಷೇತ್ರದಲ್ಲಿ 24 ಅಡಿ ಎತ್ತರದ ಪದ್ಮಾಸನ ಭಂಗಿಯ ಶೀತಲನಾಥ ತೀರ್ಥಂಕರ ಮೂರ್ತಿಯ ಪ್ರತಿಷ್ಠಾಪನೆ ಜಿನಾಗಮ ರೀತಿಯಲ್ಲಿ ವೈಭವದಿಂದ ನೆರವೇರಿತು.
ಭಾನುವಾರ ಸಂಜೆಯಿಂದ ಆರಂಭವಾಗಿದ್ದ ಪ್ರತಿಷ್ಠಾಪನಾ ಕಾರ್ಯಗಳು ಸೋಮವಾರ ಬೆಳಗಿನ ಜಾವದ ಬ್ರಹ್ಮ ಮೂಹೂರ್ತದಲ್ಲಿ ಸಂಪನ್ನವಾಯಿತು. ರಾಜಸ್ಥಾನ ರಾಜ್ಯದ ಜೈಪುರದಿಂದ ಆಗಮಿಸಿದ ಮೂರ್ತಿಯನ್ನು ಭಾನುವಾರ ಹಳೇಬೀಡು ಪಟ್ಟಣದಲ್ಲಿ ಜೈನ ಸಮಾಜದವರು ಆರತಿ ಬೆಳಗಿ ಸ್ವಾಗತಿಸಿ, ಜೈನರಗುತ್ತಿ ಕ್ಷೇತ್ರಕ್ಕೆ ಬೀಳ್ಕೊಟ್ಟರು. ಮೂರ್ತಿ ಪ್ರತಿಷ್ಫಾಪನೆಗೂ ಮೊದಲು ನವಗ್ರಹ ಶಾಂತಿ ಹಾಗೂ ಪೂರ್ಣಾಹುತಿ ನೆರವೇರಿತು. ಪೂಜಾ ಮಂಟಪ ಸ್ಥಾನದ ಮೇಲೆ ಕಮಲ ಪೀಠವನ್ನು ಇರಿಸಿದ ಬಳಿಕ ಶ್ರೀನಿಧಿ ಹಾಗೂ ನವಗ್ರಹ ಕಲಶಗಳನ್ನು ಸ್ಥಾಪನೆ ಮಾಡಲಾಯಿತು. ನಂತರ ನವರತ್ನ, ಪಂಚಧಾತು, ಸುವರ್ಣ, ರಜತ ಯಂತ್ರಗಳನ್ನು ಸ್ಥಾಪಿಸಲಾಯಿತು.
ಜೈನಮುನಿ ವೀರಸಾಗರ ಮಹಾರಾಜ್ ಹಾಗೂ ಸೋಂದಾ ಕ್ಷೇತ್ರದ ಜೈನ ಮಠಾಧಿಪತಿ ಭಟ್ಟಾಕಲಂಕ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿ ಸಮ್ಮುಖದಲ್ಲಿ ಪ್ರತಿಷ್ಟಾಚಾರ್ಯರಾದ ಪವನ ಪಂಡಿತ, ಪ್ರವೀಣ ಪಂಡಿತ, ಸ್ಥಾನಿಕ ಪುರೋಹಿತ ಶೀತಲ ಪಂಡಿತ ಹಾಗೂ ಚಂದನ ಪಂಡಿತ ಇವರು ಮಂತ್ರ ಪಠನದೊಂದಿಗೆ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಂಗಳೂರಿನ ಪ್ರವೀಣ್ ಜೈನ್ ಪರಿವಾರ ಮೂರ್ತಿ ಪ್ರತಿಷ್ಠಾಪನೆ ಪ್ರಕ್ರಿಯೆ ನೆರವೇರಿಸಿದರು.
55 ಲಕ್ಷ ರೂ. ವೆಚ್ಚದ ಶೀತಲನಾಥ ತೀರ್ಥಂಕರ ಮೂರ್ತಿಯನ್ನು ಛತ್ತೀಸ್‌ಗಢ ರಾಜ್ಯದ ದುರ್ಗ ನಿವಾಸಿ ದೇವೆಂದ್ರ ಕುಮಾರ್ ಜೈನ್, ಬಿನಾದೇವಿ ಕಲಾ, ಸಜಲ್ ಜೈನ್ ದಾನವಾಗಿ ನೀಡಿದ್ದರು. ಮಯೂರಿ ಕಲಾ ಪರಿವಾರ ಹಾಗೂ ಮೂರ್ತಿ ಕೆತ್ತನೆ ಮಾಡಿದ ರಾಜಸ್ಥಾನದ ಶಿಲ್ಪಿ ಪ್ರೀತಂ, ಮದನ್ಲಾಲ್ ಸಮ್ಮುಖದಲ್ಲಿ ಅವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಬೃಹತ್ ಮೂರ್ತಿ ಹಾಗೂ ಕಮಲ ಪೀಠವನ್ನು ಕ್ರೇನ್ ಸಹಾಯದಿಂದ ವೇದಿಯ ಮೇಲೆ ಆರೋಹಣ ಮಾಡಲಾಯಿತು.
ಧಾರ್ಮಿಕ ಕಾರ್ಯಕ್ರಮ: ದಶಕದಿಂದ ಅಭಿವೃದ್ಧಿ ಕಾಣುತ್ತಿರುವ ಜೈನರಗುತ್ತಿ ಕ್ಷೇತ್ರ ಐತಿಹಾಸಿಕ ಮಹತ್ವ ಹೊಂದಿರುವ ಪುಣ್ಯ ಕ್ಷೇತ್ರ ಎಂದು ಜೈನಮುನಿ ಶ್ರೀವೀರಸಾಗರ ಮಹಾರಾಜ್ ಹೇಳಿದರು.
ಜೈನರಗುತ್ತಿ ಕ್ಷೇತ್ರದಲ್ಲಿ ಭಾನುವಾರ ಶೀತಲನಾಥ ತೀರ್ಥಂಕರ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಜೈನರಗುತ್ತಿ ಶ್ರವಣಬೆಳಗೂಳದ ಮಠಾಧೀಶರಿಗೆ ಹೊಯ್ಸಳ ದೊರೆ ಬಲ್ಲಾಳರಾಯನು ಜೀವ ರಕ್ಷಾ ಪರಿಪಾಲಕ ಎಂದು ಬಿರುದು ನೀಡಿದ ಸ್ಥಳವಾಗಿದೆ. ಹೊಯ್ಸಳರ ಕಾಲದಲ್ಲಿ ಇಲ್ಲಿಗೆ ಸಮೀಪದ ರಾಶಿಗುಡ್ಡದಲ್ಲಿ ಜ್ವಾಲಮುಖಿ ಸಂಭವಿಸಿ ಭೂಮಿ ಬಿರುಕು ಬಿಟ್ಟಿತ್ತು. ವ್ಯಾಪಿಸುತ್ತಿದ್ದ ಜ್ವಾಲೆಯನ್ನು ಶಮನಗೊಳಿಸಿ ಬಿರುಕು ನಿಲ್ಲಿಸುವುದು ಹೊಯ್ಸಳ ದೊರೆ ಬಲ್ಲಾಳರಾಯನಿಗೆ ಕಷ್ಟವಾಗಿ ಪರಿಣಮಿಸಿತ್ತು. ಶ್ರವಣಬೆಳಗೊಳದ ಚಾರುಕೀರ್ತಿ ಪೀಠದ ಸ್ವಾಮೀಜಿ ಕೂಶ್ಮಾಂಡಿನಿ ಮೂರ್ತಿಯನ್ನು ಆನೆಯ ಮೇಲೆ ಆರೋಹಣ ಮಾಡಿಕೊಂಡು ಕರೆತಂದು ಪೂಜಾ ವಿಧಾನ ನಡೆಸಿದರು. ಮಂತ್ರ ಪಠಣದೊಂದಿಗೆ ಕುಂಬಳಕಾಯಿ ಸಮರ್ಪಿಸಿದ ನಂತರ ಭೂಮಿ ಬಿರುಕು ನಿಂತಿತು ಎಂಬುದು ರಾಜಾವಳಿ ಗ್ರಂಥದಲ್ಲಿ ಉಲ್ಲೇಖವಾಗಿದೆ ಎಂದರು.
ಅಡಗೂರು ಗ್ರಾಮದಲ್ಲಿ ನೆಲೆಸಿದ್ದ ಎಸ್.ಪಿ.ನಾಗಕುಮಾರ್ ಅವರು ಬರಡು ಭೂಮಿಯಂತಿದ್ದ ಜೈನರಗುತ್ತಿ ಸ್ಥಳದಲ್ಲಿ ಆಗಾಗ್ಗೆ ಪೂಜೆ ಮಾಡಿಸುತ್ತಿದ್ದರು. ಶಿವಪುರದ ಭೋವಿ ಜನಾಂಗದವರು ಭಕ್ತಿ-ಭಾವದಿಂದ ಜೈನರ ಕ್ಷೇತ್ರವನ್ನು ಉಳಿಸಿ ಬೆಳೆಸುತ್ತಿರುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು.
ಸೋಂದಾ ದಿಗಂಬರ ಜೈನ ಮಠದ ಪೀಠಾಧಿಪತಿ ಶ್ರೀಭಟ್ಟಾಕಲಂಕ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿ ಮಾತನಾಡಿದರು. ಕ್ಷೇತ್ರದ ಪದಾಧಿಕಾರಿಗಳಾದ ಕುಣಿಗಲ್ ಬ್ರಹ್ಮದೇವ ಜೈನ್, ನೇಮಿರಾಜ ಆರಿಗ, ಧನಪಾಲ್ ಜೈನ್, ಎಸ್.ಎನ್.ಅಶೋಕ್‌ಕುಮಾರ್, ಹೊಂಗೇರಿ ದೇವೇಂದ್ರ, ಕೀರ್ತಿಕುಮಾರ್, ಶಶಿಕುಮಾರ್, ಮನ್ಮಥರಾಜು, ಧಾವನ್ ಜೈನ್, ಹಳೇಬೀಡು ಜೈನ ಸಮಾಜದ ಜೆ.ಪಿ.ಮಹಾವೀರ್ ಸಹೋದರರು ಭಾಗವಹಿಸಿದ್ದರು.