ಜಿಲ್ಲೆ

ಉಪ್ಪಿನ ಬೆಟಗೇರಿಯಲ್ಲಿ ಸಸಿ ಡೋಲಿ ಪ್ರತಿಷ್ಠಾಪನೆ

ಉಪ್ಪಿನಬೆಟಗೇರಿ: ತ್ಯಾಗ, ಬಲಿದಾನಗಳ ಸಂಕೇತವಾದ ಮೊಹರಂ ಹಬ್ಬವನ್ನು ಗ್ರಾಮದಲ್ಲಿ ಹಿಂದು-ಮುಸ್ಲಿಂ ಸಮಾಜದವರು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲು ನಿರ್ಧರಿಸಿದ್ದಾರೆ. ಮೊಹರಂ ಹಬ್ಬದಲ್ಲಿ ರಾಜ್ಯದ ಎರಡು ಜಿಲ್ಲೆಗಳಲ್ಲಿ ಸಸಿ ಡೋಲಿಗಳನ್ನು ನಿರ್ವಿುಸಿ ಪೂಜೆ ಮಾಡಿದರೆ, ಬೇರೆ ಕಡೆಗೆ ಕಾಗದದಿಂದ ತಯಾರಿಸಿದ ಡೋಲಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಆದರೆ, ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಮತ್ತು ವಿಜಯಪುರದಲ್ಲಿ ಮಾತ್ರ ಸಸಿ ಡೋಲಿಗಳನ್ನು ತಯಾರಿಸಿ ಹಬ್ಬ ಆಚರಿಸಲಾಗುತ್ತದೆ. ವಿಜಯಪುರದಲ್ಲಿ ಮಣ್ಣಿನಲ್ಲಿ ಬೀಜ ನೆಟ್ಟು ಸಸಿ ಬೆಳೆಸಿದರೆ, ಉಪ್ಪಿನಬೆಟಗೇರಿಯಲ್ಲಿ ಜೈದರ ಹತ್ತಿಯ ಮೇಲೆ ಸಸಿ ಬೆಳೆಸಲಾಗುತ್ತದೆ. ಗ್ರಾಮದ ಹಳೆಯ ಬಸ್ ನಿಲ್ದಾಣದ ಸಮೀಪ ಇರುವ ಸಸಿ ಮಸೂತಿಯಲ್ಲಿ ಮೊಹರಂ ಚಂದ್ರದರ್ಶನದ ನಂತರ ಈ ಸಸಿ ಡೋಲಿ ತಯಾರಿ ನಡೆಸಲಾಗುತ್ತದೆ. ಡೋಲಿ ತಯಾರಿಸುವವರು ಕಡ್ಡಾಯವಾಗಿ ಹತ್ತಿಯಲ್ಲಿನ ಬೀಜ, ಕಸ, ಕಡ್ಡಿಗಳನ್ನು ಬೇರ್ಪಡಿಸಿ ಶುದ್ಧೀಕರಿಸಿ ಬಿದಿರಿನಿಂದ ತಯಾರಿಸಿದ ಡೋಲಿ ಮೇಲೆ ಹತ್ತಿಯನ್ನು ದಪ್ಪ ಮಾಡಿ ಇಡುತ್ತಾರೆ. ಅದು ಕೆಳಗೆ ಬೀಳದಂತೆ ದಾರದಿಂದ ಸುತ್ತಿ ನೀರಿನಲ್ಲಿ ನೆನೆಸಿ ಹೊದಿಕೆ ಭದ್ರಪಡಿಸುತ್ತಾರೆ. ತೊಯ್ದ ಹತ್ತಿಯ ಮೇಲೆ ಅಳವಿ ಬೀಜಗಳನ್ನು ಲೇಪಿಸುತ್ತಾರೆ. ಅಳವಿ ಬೀಜಗಳು 3 ರಿಂದ 4 ದಿನಗಳಲ್ಲಿ 2 ರಿಂದ 3 ಇಂಚು ಬೆಳೆಯುತ್ತವೆ. ಅಲಾಹಿ ದೇವರು ಹೊಳೆಗೆ ಹೋಗುವ ದಿನ ಈ ಡೋಲಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮೂಲ ಸ್ಥಳಕ್ಕೆ ಒಯ್ಯುತ್ತಾರೆ.

ಇತಿಹಾಸ ಪ್ರಸಿದ್ಧ ಡೋಲಿ: ಹಿರಿಯರ ಪ್ರಕಾರ ಸಸಿ ಡೋಲಿಯು ಕ್ರಿಶ 1551ರಲ್ಲಿ ವಿಜಯಪುರ ಗ್ರಾಮದವರೇ ಆಗಿದ್ದ ಅನ್ಸಾರಿ ಸಾಹೇಬ ವಿಜಾಪೂರ ಎಂಬ ಕುಟುಂಬ ಉಪ್ಪಿನಬೆಟಗೇರಿಗೆ ವಲಸೆ ಬಂದು ನೆಲೆಸಿದ್ದರು. ಪ್ರತಿ ವರ್ಷ ನಡೆಯುವ ಮೊಹರಂ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಬೇಕು ಎಂದು ನಿರ್ಧರಿಸಿ ವಿಜಯಪುರದಲ್ಲಿರುವ ಹಾಗೆ ಒಂದು ಸಸಿ ಡೋಲಿ ಸ್ಥಾಪಿಸಬೇಕೆಂದು ಸಂಕಲ್ಪಿಸಿ ತಾವು ವಾಸವಿದ್ದ ಮನೆ ಹತ್ತಿರ ಮಸೀದಿ ನಿರ್ವಿುಸಿ ಅದರಲ್ಲಿ ಸಸಿ ಡೋಲಿ ಪ್ರತಿಷ್ಠಾಪನೆಗೆ ಚಾಲನೆ ನೀಡಿದರು.

ಡೋಲಿಯ ವಿಶೇಷತೆ: ಡೋಲಿಯ ತಯಾರಿಕೆಯ ದಿನದಿಂದ ಮುಕ್ತ ದರ್ಶನದವರೆಗೂ ಮೊದಲಿದ್ದ ಸ್ಥಳ ಬದಲಿ ಮಾಡುವಂತಿಲ್ಲ. ಒಂದು ವೇಳೆ ಸ್ಥಳ ಬದಲಾವಣೆ ಮಾಡಿದ್ದೇ ಆದಲ್ಲಿ ಹತ್ತಿಯ ಮೇಲೆ ಲೇಪಿಸಿದ ಅಳವಿ ಬೀಜಗಳು ಬೆಳೆಯುವುದಿಲ್ಲ. ಇದನ್ನು ವೀಕ್ಷಿಸಲೆಂದು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ತಮ್ಮ ಹರಕೆ ಹೊರುತ್ತಾರೆ. ಇಷ್ಟಾರ್ಥ ಸಿದ್ಧಿಸಿದವರು ಮಸೀದಿಗೆ ಆಗಮಿಸಿ ಹರಕೆ ತೀರಿಸುತ್ತಾರೆ.

ಬೆಳೆ ನಿರ್ಧರಿಸೋ ಡೋಲಿ: ರೈತರು ಬೆಳೆಯುವಂತಹ ದವಸ-ಧಾನ್ಯಗಳು ಈ ಸಸಿ ಡೋಲಿ ಅವಲಂಬಿಸಿವೆ ಎನ್ನುತ್ತಾರೆ ಹಿರಿಯರು. ಈ ಡೋಲಿಯಲ್ಲಿ ಸಸಿಗಳು ಯಾವ ರೀತಿಯಲ್ಲಿ ಬೆಳೆಯುತ್ತವೆಯೋ ಅದೇ ತೆರನಾಗಿ ನಮ್ಮ ಮುಂದಿನ ಬೆಳೆಗಳು ಹುಲುಸಾಗಿ ಬೆಳೆಯುತ್ತದೆ ಎಂಬುವುದು ಈ ಗ್ರಾಮಸ್ಥರ ನಂಬಿಕೆಯಾಗಿದೆ.

ಶನಿವಾರದ ಸಂತೆ ಶುಕ್ರವಾರ

ಮೊಹರಂ ಹಬ್ಬ ಶನಿವಾರ ಜರುಗುವುದರಿಂದ ಅಂದು ನಡೆಯಬೇಕಿದ್ದ ಉಪ್ಪಿನಬೆಟಗೇರಿ ಗ್ರಾಮದ ಶನಿವಾರದ ಸಂತೆಯನ್ನು ಒಂದು ದಿನ ಮುಂಚಿತವಾಗಿ (ಶುಕ್ರವಾರ) ನಡೆಸಲು ತೀರ್ವನಿಸಿ ಗ್ರಾಪಂನವರು ಗ್ರಾಮದಲ್ಲೂ ಡಂಗುರ ಸಾರಿದ್ದಾರೆ.