ಜಿಲ್ಲೆ

ಕುಮದ್ವತಿ ನದಿಗೆ ಗೇಟ್ ಅಳವಡಿಕೆ : ರೈತರ ಹಲವು ದಿನಗಳ ಕನಸು ನನಸು

ರಟ್ಟಿಹಳ್ಳಿ: ಈ ಭಾಗದ ರೈತರ ಜೀವನಾಡಿಯಾಗಿರುವ ಕುಮದ್ವತಿ ನದಿಗೆ ನಿರ್ವಿುಸಿರುವ ಬಾಂದಾರ ಸಹಿತ ಸೇತುವೆಗೆ ಗೇಟ್ ಅಳವಡಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ರೈತರ ಬಹುದಿನಗಳ ಕನಸು ನನಸಾಗುತ್ತಿದೆ.

ರಟ್ಟಿಹಳ್ಳಿ-ತೋಟಗಂಟಿ ಗ್ರಾಮಗಳ ಮಧ್ಯದ ಸೇತುವೆಗೆ 2 ಮೀಟರ್ ಎತ್ತರದ ಗೇಟ್ ಅಳವಡಿಸಲಾಗುತ್ತಿದೆ. ಉಳಿದ 2 ಬಾಂದರಗಳಿಗೂ ಗೇಟ್​ಗಳು ತಯಾರಾಗಿದ್ದು, 10 ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ.

ಮುಂಗಾರು ಸಮಯದಲ್ಲಿ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದಿಂದ ಬರುವ ನೀರು ತಾಲೂಕಿನ ಮದಗದ ಕೆಂಚಮ್ಮನ ಕೆರೆ ಭರ್ತಿಯಾಗಿ ಕೋಡಿ ಮೂಲಕ ಹರಿಯುವ ಕುಮದ್ವತಿ ನದಿಯು ತಿಪ್ಪಾಯಿಕೊಪ್ಪ, ಮಾಸೂರು, ಖಂಡೇಬಾಗೂರು, ಹಿರೇಮೊರಬ, ಎಲಿವಾಳ, ಮಳಗಿ, ರಟ್ಟಿಹಳ್ಳಿ, ಸಣ್ಣಗುಬ್ಬಿ, ಹಿರೇಮಾದಾಪುರ, ಬಡಾಸಂಗಾಪುರ ಗ್ರಾಮಗಳ ಸರಹದ್ದಿನ ಮೂಲಕ ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ಬಳಿ ತುಂಗಭದ್ರಾ ನದಿಗೆ ಸೇರುತ್ತದೆ.

ಮುಂಗಾರು ವೇಳೆ ಉತ್ತಮವಾದರೆ ಜುಲೈನಿಂದ ಹರಿಯುವ ಕುಮದ್ವತಿ ನದಿಯ ನೀರಿನ ಹರಿವು ಡಿಸೆಂಬರ್ ವೇಳೆಗೆ ಪೂರ್ಣ ಬರಿದಾಗುತ್ತದೆ. ಈ ಹಿನ್ನೆಲೆಯಲ್ಲಿ ನದಿಯ ನೀರನ್ನು ವರ್ಷಂಪೂರ್ತಿ ಸಂಗ್ರಹಿಸಲು ಮತ್ತು ಅಂತರ್ಜಲ ವೃದ್ಧಿಗೆ, ನೀರಾವರಿ ವ್ಯವಸ್ಥೆಗಾಗಿ ರೈತರು ಈ ಭಾಗದಲ್ಲಿ ನದಿಗೆ ಬಾಂದಾರ ಸಹಿತ ಸೇತುವೆ ನಿರ್ವಿುಸಲು ಒತ್ತಾಯಿಸಿದ್ದರು.

17 ಕೋಟಿ ರೂ. ವೆಚ್ಚ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಮಾಜಿ ಸಚಿವ ಬಿ.ಸಿ. ಪಾಟೀಲ ಮನವಿ ಮೇರೆಗೆ 2020-21ನೇ ಸಾಲಿನಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ಮಾಸೂರು-ಮೇದೂರು, ಹಿರೇಮೊರಬ-ಚಿಕ್ಕಮೊರಬ, ರಟ್ಟಿಹಳ್ಳಿ-ತೋಟಗಂಟಿ ಮತ್ತು ಹಿರೇಮಾದಾಪುರ-ದೊಡ್ಡಗುಬ್ಬಿ ಬಳಿ ನಾಲ್ಕು ಬಾಂದಾರ ಸಹಿತ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ಈಗಾಗಲೇ 3 ಬಾಂದಾರಗಳ ಕೆಲಸ ಮುಕ್ತಾಯವಾಗಿದೆ. ಹಿರೇಮಾದಪುರ ಬಳಿ ಕಾಮಗಾರಿ ಪ್ರಗತಿಯಲ್ಲಿದೆ.

ಕಳೆದ ತಿಂಗಳಿನಿಂದ ಮಳೆ ಸಂಪೂರ್ಣ ಮಾಯವಾಗಿದ್ದು, ನದಿಯಲ್ಲಿ ನೀರಿನ ಹರಿವು ದಿನೇ ದಿನೇ ಇಳಿಕೆಯಾಗಿತ್ತಿದೆ. ಮಳೆಯನ್ನು ನಂಬಿ ರೈತರು ಮೆಕ್ಕೆಜೋಳ, ಹತ್ತಿ ಸೇರಿದಂತೆ ಇತರೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಈಗಾಗಲೇ ರೈತರು ಬೋರ್​ವೆಲ್ ಮೂಲಕ ಬೆಳೆ ರಕ್ಷಣೆಗೆ ಮುಂದಾಗಿದ್ದಾರೆ.

ಸಾಮಾನ್ಯವಾಗಿ ಬಾಂದಾರಗಳಿಗೆ ಮಳೆಗಾಲದ ಮುಕ್ತಾಯದ ಸಮಯದಲ್ಲಿ 3 ಗೇಟ್​ಗಳನ್ನು ಅಳವಡಿಸಲಾಗುತ್ತದೆ. ಆದರೆ, ಈಗ ಮಳೆ ಕಡಿಮೆಯಾಗಿರುವುದರಿಂದ 2 ಮೀಟರ್ ಎತ್ತರದ ಗೇಟ್​ಗಳನ್ನು ಅಳವಡಿಸಲಾಗುತ್ತಿದೆ. ಉಳಿದ 1 ಮೀಟರ್ ಗೇಟ್ ಅನ್ನು ಮಳೆಗಾಲವನ್ನು ಅವಲೋಕಿಸಿ ಅಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೇಟ್​ಗಳನ್ನು ಅಳವಡಿಸುತ್ತಿರುವುದರಿಂದ ನೂರಾರು ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ದೊರುಕುತ್ತದೆ. ಜತೆಗೆ ಅಂತರ್ಜಲ ವೃದ್ಧಿಯಾಗುತ್ತವೆ ಮತ್ತು ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಸಿಗುತ್ತದೆ.

ಮಳೆ ಅಭಾವದಿಂದ ಬೆಳೆಗಳು ಒಣಗುತ್ತಿವೆ. ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ. ಕುಮದ್ವತಿ ನದಿಯ ಸೇತುವೆ ಸಹಿತ ಬಾಂದಾರಗಳಿಗೆ ಗೇಟ್​ಗಳನ್ನು ಶೀಘ್ರವೇ ಅಳವಡಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಬಾಂದಾರಗಳಿಗೆ ಗೇಟ್​ಗಳನ್ನು ಅಳವಡಿಸುತ್ತಿದ್ದಾರೆ. ನೀರು ಸಂಗ್ರಹದಿಂದ ರೈತರಿಗೆ ಅನುಕೂಲವಾಗಲಿದೆ. | ಯು.ಬಿ.ಬಣಕಾರ, ಶಾಸಕ ಮಳೆಗಾಲ ಮುಕ್ತಾಯದ ಸಮಯ ಅಕ್ಟೋಬರ್​ನಲ್ಲಿ ಬಾಂದಾರಗಳಿಗೆ ಗೇಟ್​ಗಳನ್ನು ಅಳವಡಿಸಲಾಗುತ್ತದೆ. ಸದ್ಯ ಮಳೆ ಇಲ್ಲದಿರುವುದರಿಂದ ಶಾಸಕ ಯು.ಬಿ. ಬಣಕಾರ ಅವರು ರೈತರ ಅನುಕೂಲಕ್ಕಾಗಿ ಗೇಟ್​ಗಳನ್ನು ಅಳವಡಿಸಲು ಸೂಚಿಸಿದ್ದರು. ಎಲ್ಲ ಬಾಂದಾರಗಳಿಗೆ ಸದ್ಯ 2 ಗೇಟ್​ಗಳನ್ನು ಅಳವಡಿಸಲಾಗುತ್ತಿದೆ. | ಮಂಜುನಾಥ ಬಡಿಗೇರ ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಹಾನಗಲ್ಲ