ಹುಬ್ಬಳ್ಳಿ: ಇಲ್ಲಿನ ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಮಂಗಳವಾರ ಶ್ರೀ ಗಣೇಶ ಮೂರ್ತಿಯನ್ನು ವಿಜೃಂಭಣೆಯಿಂದ ಪ್ರತಿಷ್ಠಾಪನೆ ಮಾಡಿ, ಜೈಕಾರ ಮೊಳಗಿಸಲಾಯಿತು.
ಪ್ರತಿಷ್ಠಾಪನೆಗೆ ಮುನ್ನ ನಗರದ ಮೂರುಸಾವಿರ ಮಠ ಆವರಣದಲ್ಲಿ ಗಣೇಶ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಮೆರವಣಿಗೆಯು ಮಹಾವೀರಗಲ್ಲಿ, ತುಳಜಾಭವಾನಿ ವೃತ್ತ, ದಾಜಿಬಾನಪೇಟೆ, ಅಂಚಟಗೇರಿ ಓಣಿ ಮೂಲಕ ಆಗಮಿಸಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೈದಾನ ತಲುಪಿತು.
ಮೆರವಣಿಗೆಯಲ್ಲಿ ಗಣೇಶ ಮೂರ್ತಿ ಜತೆಗೆ ಭಾರತ ಮಾತೆಯ ಭಾವಚಿತ್ರ, ಭಗವಾಧ್ವಜ, ಕೇಸರಿ ಬಾವುಟಗಳು ರಾರಾಜಿಸಿದವು. ಪಂಚವಾದ್ಯ, ಝಾಂಜ್, ನಾಸಿಕ್ ಡೋಲು ಮೆರವಣಿಗೆಗೆ ಮೆರಗು ತಂದವು. ಡಿಜೆ ಶಬ್ದಕ್ಕೆ ಬಹಳಷ್ಟು ಜನರು ಹೆಜ್ಜೆ ಹಾಕಿದ್ದಲ್ಲದೇ, ಗಣೇಶ ಮಹರಾಜ್ಕೀ ಜೈ ಎಂಬ ಜಯಘೊಷ ಮೊಳಗಿಸಿದರು. ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳ, ಬಿಜೆಪಿ, ಆರ್ಎಸ್ಎಸ್, ಹಿಂದು ಜಾಗರಣ ವೇದಿಕೆ, ವಿಶ್ವಹಿಂದು ಪರಿಷತ್ ಸೇರಿ ವಿವಿಧ ಹಿಂದುಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಮೈದಾನದಲ್ಲಿ ನಿರ್ವಿುಸಿದ್ದ ವೇದಿಕೆಗೆ ಮೆರವಣಿಗೆ ಆಗಮಿಸುತ್ತಿದ್ದಂತೆ ವಾಹನದಲ್ಲಿದ್ದ ಗಣೇಶ ಮೂರ್ತಿಯನ್ನು ವೇದಿಕೆಯೊಳಗೆ ಕರೆದೊಯ್ಯಲಾಯಿತು. ನಂತರ ಪ್ರತಿಷ್ಠಾಪನೆ ಮಾಡಿ, ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ವೀಣಾ ಬರದ್ವಾಡ, ಉಪ ಮೇಯರ್ ಸತೀಶ ಹಾನಗಲ್ಲ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ರಾಮಣ್ಣ ಬಡಿಗೇರ, ವೀರಣ್ಣ ಸವಡಿ, ಪ್ರಮುಖರಾದ ಸಂಜೀವ ಬಡಸ್ಕರ್, ರಘು ಯಲ್ಲಕ್ಕನವರ, ಎಂ.ವಿ. ಕರಮರಿ, ಪ್ರದೀಪ ಕೆ. ಶೆಟ್ಟಿ, ರವಿ ನಾಯಕ, ಇತರರು ಇದ್ದರು.
ಬಿಗಿ ಪೊಲೀಸ್ ಬಂದೋಬಸ್ತ್
ಡಿಸಿಪಿ ರಾಜೀವ ಎಂ. ನೇತೃತ್ವದಲ್ಲಿ ಮೆರವಣಿಗೆಯುದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ 2 ಡಿಸಿಪಿ, 6 ಎಸಿಪಿ, 385 ಪೇದೆ, ಸಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರು ಮೈದಾನಕ್ಕೆ ಆಗಮಿಸಿ, ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು.
ಇತರ ಅಧಿಕಾರಿಗಳ ಉಪಸ್ಥಿತಿ
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಶಹರ ತಹಸೀಲ್ದಾರ್ ಕಲಗೌಡ ಪಾಟೀಲ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಹಲವು ಸಲಹೆ-ಸೂಚನೆಗಳನ್ನು ತಮ್ಮ ಇಲಾಖೆಯ ಸಿಬ್ಬಂದಿಗೆ ನೀಡುತ್ತಿದ್ದರು.
ಲಾಬೂರಾಮ ವೀಕ್ಷಣೆ
ಗುಪ್ತಚರ ಇಲಾಖೆ ಐಜಿಪಿ ಲಾಬೂರಾಮ ಅವರು ಉಪನಗರ ಠಾಣೆಯ ಮೂರನೇ ಮಹಡಿಯಲ್ಲಿ ನಿಂತು ಗಣೇಶೋತ್ಸವವನ್ನು ವೀಕ್ಷಿಸಿದರು. ಅವರು ನೋಡುತ್ತಿರುವುದು ಹಲವರಿಗೆ ಗೊತ್ತಾಗುತ್ತಿದ್ದಂತೆ ಲಾಬೂರಾಮ ಅವರು ತಾವು ನಿಂತಿದ್ದ ಕಿಟಕಿ ಮುಚ್ಚಿದರು.