ಜಿಲ್ಲೆ

ಮುಸ್ಲಿಂ ಯುವಕರಿಂದ ಗಣಪತಿ ಪ್ರತಿಷ್ಠಾಪನೆ

ರಟ್ಟಿಹಳ್ಳಿ: ತಾಲೂಕಿನ ಕುಡುಪಲಿ ಗ್ರಾಮದಲ್ಲಿ ಬಹುತೇಕ ಮುಸ್ಲಿಂ ಯುವಕರೇ ಸೇರಿ ಗಣೇಶನ ಪ್ರತಿಷ್ಠಾಪಿಸಿ ಅತ್ಯಂತ ಶ್ರದ್ಧೆ, ಭಕ್ತಿಯಿಂದ ಪೂಜಿಸಿ ಭಾವೈಕ್ಯ ಮೆರೆಯುತ್ತಿದ್ದಾರೆ.

ಗ್ರಾಮದಲ್ಲಿ ಮುಸ್ಲಿಂ ಸಮಾಜದ ಕುಟುಂಬಗಳು ಹೆಚ್ಚಿವೆ. ಕೆಲವೇ ಹಿಂದು ಕುಟುಂಗಳಿವೆ. ಇಂತಹ ಗ್ರಾಮದಲ್ಲಿ 35 ವರ್ಷದ ಹಿಂದೆ ಗ್ರಾಮದ ಎರಡು ಸಮಾಜದವರು ಕೂಡಿ ಭಾವೈಕ್ಯದಿಂದ ಗಣೇಶ ಚತುರ್ಥಿ ಆಚರಿಸಿಕೊಂಡು ಬಂದಿದ್ದಾರೆ. ಕಳೆದ 8-10 ವರ್ಷಗಳಿಂದ 15ಕ್ಕೂ ಹೆಚ್ಚು ಮುಸ್ಲಿಂ ಯುವಕರು ಹಾಗೂ ಐದಾರು ಜನ ಹಿಂದು ಯುವಕರು ಸೇರಿ ಗಜಾನನ ಯುವಕ ಸಂಘ ಕಟ್ಟಿಕೊಂಡು ಗಣಪತಿ ಪ್ರತಿಷ್ಠಾಪಿಸಿ, ಹಿಂದಿನ ಹಿರಿಯರ ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಯುವಕರು ತಾವೇ ಸ್ವತಃ ಹಣ ಕೂಡಿಸಿಕೊಂಡು ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಪ್ರತಿದಿನ ಗಣೇಶನಿಗೆ ಪೂಜೆ ನಡೆಯುತ್ತದೆ. 3ನೇ ದಿನಕ್ಕೆ ಅನ್ನ ಸಂತರ್ಪಣೆ ನಡೆಸುತ್ತಾ ಬಂದಿದ್ದಾರೆ. ವಿಸರ್ಜನೆ ದಿನ ಹಿಂದು-ಮುಸ್ಲಿಂ ಎನ್ನದೇ ಎಲ್ಲರೂ ಒಂದಾಗಿ ಗಣೇಶನನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಕುಮದ್ವತಿ ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಇಲ್ಲಿ ಪ್ರತಿವರ್ಷ ಹಿಂದು-ಮುಸ್ಲಿಂ ಯುವಕರು ಒಂದಾಗಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವುದು ಮಾದರಿಯಾಗಿದೆ.

ಯುವಕರು ಪ್ರತಿಷ್ಠಾಪಿಸಿಕೊಂಡು ಹೋಗುತ್ತಿರುವ ಗಣೇಶನ ಉತ್ಸವಕ್ಕೆ ಈ ಹಿಂದಿನ ಗಜಾನನ ಯುವಕ ಸಂಘದವರು ಮತ್ತು ಗಣೇಶನ ಪ್ರತಿಷ್ಠಾಪಿಸುವ ಸ್ಥಳದ ಸುತ್ತಮುತ್ತ ಇರುವ ಹಿಂದು ಮತ್ತು ಮುಸ್ಲಿಂ ಜನರು ಪ್ರೋತ್ಸಾಹ ನೀಡುತ್ತಿದ್ದಾರೆ.