ಕಡೂರು: ಪಟ್ಟಣದ ದೊಡ್ಟಪೇಟೆಯ ರಾಮದೇವರ ಗುಡಿ ಬೀದಿಯ ಶ್ರೀ ರಾಮ ದೇವಸ್ಥಾನದಲ್ಲಿ 5, 6ರಂದು ಶ್ರೀರಾಮ ದೇವರ ನೂತನ ಉತ್ಸವ ಮೂರ್ತಿ ಪ್ರತಿಷ್ಟಾಪನಾ ಮಹೋತ್ಸವ ಮತ್ತು ರಾಮನವಮಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಜಿ. ರವಿಕುಮಾರ್ ತಿಳಿಸಿದ್ದಾರೆ.
5ರ ಶನಿವಾರ ಪಂಚಲೋಹದ ಶ್ರೀರಾಮದೇವರ ನೂತನ ವಿಗ್ರಹ ಪ್ರತಿಷ್ಟಾಪನೆ, ಬೆಳಗ್ಗೆ ಗಂಗಾಪೂಜೆ, ದೀಪಾರಾಧನೆ, ಸಂಕಲ್ಪ, ಗಣಪತಿ ಪೂಜೆ, ವಾಸುದೇವ ಪುಣ್ಯಾಹಃ, ಅಂಕುರಾರ್ಪಣೆ, ರಕ್ಷಾಬಂಧನ, ಕುಂಭಾರಾಧನೆ, ವಾಸ್ತು ಹೋಮ, ಪಂಚಗವ್ಯ, ಕ್ಷೇತ್ರ ಪರಿಪಾಲಕ ಪರಿವಾಹ ಹೋಮ ಧಾರ್ಮಿಕ ಕಾರ್ಯಗಳು ನಡೆಯಲಿವೆ. 6ರ ಭಾನುವಾರ ಬೆಳಗ್ಗೆ ಕುಂಭಾರಾಧನೆ, ಪ್ರಧಾನ ಕಳಸಾರಾಧನೆ, ಗಣಪತಿ ಹೋಮ, ಭಗವತ್ ವಿಗ್ರಹಕ್ಕೆ ಜೀವನ್ಯಾಸ ಹೋಮ, ಮೂರ್ತಿಹೋಮ ಬಳಿಕ ಶ್ರೀ ಸ್ವಾಮಿಯ ಉತ್ಸವ ಮೂರ್ತಿ ವಿಗ್ರಹ ಪ್ರತಿಷ್ಟಾಪನೆ, ನಂತರ ಪ್ರಧಾನ ರಾಮತಾರಕ ಹೋಮ ನಡೆಯಲಿದೆ. ನಂತರ ದಾಸೋಹ ಹಮ್ಮಿಕೊಳ್ಳಲಾಗಿದೆ. ಸಂಜೆ 6ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.