ಜಿಲ್ಲೆ

ಸರ್ವಜ್ಞ ಪೀಠಕ್ಕೆ ಸ್ವರ್ಣ ಕವಚ ಅಳವಡಿಕೆ ಕಾರ್ಯ ಆರಂಭ...

ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಚಾಲನೆ

ಕಲಾವಿದ ಗಂಜೀಫಾ ರಘುಪತಿ ಭಟ್ಟ ತಂಡದಿಂದ ಕೆಲಸ

ವಿಜಯವಾಣಿ ಸುದ್ದಿಜಾಲ ಉಡುಪಿ

ಪೊಡವಿಗೊಡೆಯ ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಸನ್ನಿಧಾನ ಇರುವ ಸರ್ವಜ್ಞ ಪೀಠಕ್ಕೆ ಸ್ವರ್ಣ ಕವಚ ಅಳವಡಿಕೆ ಕಾರ್ಯಕ್ಕೆ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಮಾ.21ರಂದು ಬೆಳಗ್ಗೆ ಚಾಲನೆ ನೀಡಿದರು.

ವಿಶೇಷ ಕಾರ್ಯದ ನಿಮಿತ್ತ ಶ್ರೀಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ, ಸ್ವರ್ಣ ಕವಚ ಅಳವಡಿಸುವ ಕಾರ್ಯಕ್ಕೆ ಶುಭ ಕೋರಿದರು. 'ಆದಿ ಗುರುಗಳ ವಿಶೇಷ ಸೇವೆಯಿಂದಾಗಿ ನಮ್ಮ ಜೀವನವೂ ಸಹ ಸಕಲ ಸಂಕಷ್ಟಗಳಿಂದ ದೂರವಾಗಿ ಸ್ವರ್ಣಮಯವಾಗುವುದು' ಎಂದು ಆಶೀರ್ವಚನ ನೀಡಿದರು.

ಶ್ರೀ ಮಠದ ಶಿಷ್ಯ, ದೇಶದ ಪ್ರತಿಷ್ಠಿತ ಕಾಳಿದಾಸ ಸಮ್ಮಾನ್​ ಪ್ರಶಸ್ತಿ ಪುರಸತ ಗಂಜೀಫಾ ಕಲೆಯ ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್ಟ ಅವರು ತಮ್ಮ ತಂಡದವರೊಂದಿಗೆ ಸೂಕ್ಷ್ಮ ಕಾರ್ಯ ನೆರವೇರಿಸಲಿದ್ದಾರೆ.

ಭಕ್ತರಿಗೂ ಅವಕಾಶ

ಪುತ್ತಿಗೆ ಸುಗುಣೇಂದ್ರ ಶ್ರೀಗಳು ಸನ್ಯಾಸಾಶ್ರಮ ಸ್ವೀಕರಿಸಿ ಐವತ್ತು ವರ್ಷವಾದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಸಂಭ್ರಮದ ನಿಮಿತ್ತ ಸರ್ವಜ್ಞ ಪೀಠಕ್ಕೆ ಸ್ವರ್ಣ ಕವಚ ಅಳವಡಿಸಲಾಗುತ್ತಿದೆ. ಏ.14ರಂದು ಸ್ವರ್ಣ ಕವಚ ಸಮರ್ಪಣೆ ನಡೆಯಲಿದ್ದು, ಈ ಕಾರ್ಯದಲ್ಲಿ ಭಕ್ತರೂ ಸಹ ಆರ್ಥಿಕ ಸಹಕಾರ ನೀಡಲು ಅವಕಾಶವಿದೆ ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ತಿಳಿಸಿದ್ದಾರೆ.