ಜಿಲ್ಲೆ

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಪ್ರೇರಣೆ : ಡಾ.ಬಿ.ಟಿ. ಲಲಿತಾ ನಾಯಕ್ ಹೇಳಿಕೆ

ಬೆಂಗಳೂರು: ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಅವರೇ ನನಗೆ ಆದರ್ಶ ಎಂದು ಮಾಜಿ ಸಚಿವೆ ಡಾ. ಬಿ.ಟಿ. ಲಲಿತಾ ನಾಯಕ್ ಹೇಳಿದ್ದಾರೆ.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಆಯೋಜಿಸಿದ್ದ ‘ಕಳತಾವೂರ್ ಮಳಾವ್-3 ಮೀನಾರೋ ಪಾಮಣೋ’ (ಸಜ್ಜನರ ಸಲ್ಲಾಪ-ತಿಂಗಳ ಅತಿಥಿ) ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯದಲ್ಲೇ ವ್ಯಾಸಂಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ನನಗೆ ಸಾಂಸಾರಿಕ ಸಮಸ್ಯೆಯಿಂದಾಗಿ 8ನೇ ತರಗತಿಗೆ ಶಾಲೆ ಬಿಡಬೇಕಾಯಿತು. ಆಗ ಸಂಸಾರದ ಕೆಲ ಸಂಗತಿಗಳಿಗೆ ಬರಹ ರೂಪದ ನೀಡಿದೆ. ಬಹುಮುಖ್ಯವಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತಿಸುತ್ತ ಹೆಚ್ಚು ಬರೆಯಲು ಪ್ರಾರಂಭಿಸಿದ ನನಗೆ ತಂದೆ ಒತ್ತಾಸೆ ನೀಡಿದರು ಎಂದರು.

ರಾಜಕೀಯ ಕ್ಷೇತ್ರಕ್ಕೆ ಬಂದು ಕೆಲವರ ಪಿತೂರಿಗಳಿಂದ ಅಧಿಕಾರ ಕಳೆದುಕೊಂಡೆ. ನಜೀರ್ ಸಾಬ್ ಅವರು ನನ್ನನ್ನು ಎಂಎಲ್ಸಿ ಮಾಡಲು ಕಾರಣರಾದರು, ಆನಂತರ ಸಚಿವೆಯಾದೆ. ಆಗಲೂ ಸಾಹಿತ್ಯ ರಚನೆ ಬಗ್ಗೆ ಬಹಳ ತುಡಿತವಿತ್ತು. ನನ್ನ ಸತ್ಯನಿಷ್ಠೆ, ಸರಳ ಜೀವನ ಪರಿಣಾಮ ಸಚಿವೆಯಾಗಿ ಹೆಚ್ಚು ದಿನ ಉಳಿಯಲು ಸಾಧ್ಯವಾಗಲಿಲ್ಲ. ನಂತರದಲ್ಲೂ ದೃತಿಗೆಡದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್.ಎಲ್. ಮುಕುಂದರಾಜ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸಾ, ಶಿಕ್ಷಣ ತಜ್ಞ ಪ್ರೊ. ಪಾಂಡು ನಾಯಕ್, ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಉತ್ತಮ್ ರಾಥೋಡ್, ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಇತರರಿದ್ದರು.

ಬಂಜಾರ ವಿಶ್ವಕೋಶ:

ಕಳೆದ ಆರು ತಿಂಗಳಿಂದ ಅಕಾಡೆಮಿಯು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ 28ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದೆ. ಬಂಜಾರ ವಿಶ್ವಕೋಶ ರಚಿಸುವ ಕಾರ್ಯದಲ್ಲಿ ತೊಡಗಿದ್ದು, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ ತಿಳಿಸಿದರು. ರಾಜ್ಯದ ಎಲ್ಲ ವಿವಿಗಳಲ್ಲಿ ವಿಚಾರಸಂಕಿರಣ ಆಯೋಜಿಸಲಾಗಿದೆ. ಬಂಜಾರ ಯುವಜನತೆಗೆ ಕಸೂತಿ, ತರಬೇತಿ ಶಿಬಿರ, ವಿಜಯಪುರದಲ್ಲಿ 10 ದಿನಗಳ ಬಂಜಾರ ಆಭರಣ ತಯಾರಿಕೆ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ವಿವರಿಸಿದರು.