ಕೆರೂರ: ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಶೇಖರ ಪಮ್ಮಾರ ಹೇಳಿದರು.
ಸಮೀಪದ ನರೇನೂರ ಎಲ್‌ಟಿ 1 ತಾಂಡಾದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಶೇಖರ ಪಮ್ಮಾರ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಲು ಈ ಪ್ರತಿಭಾ ಕಾರಂಜಿ ಸಹಕಾರಿ ಆಗುತ್ತದೆ.
ಮಕ್ಕಳಲ್ಲಿ ಕ್ರಿಯಾಶೀಲ, ಸೃಜನಶೀಲ ಗುಣಗಳನ್ನು ಬೆಳೆಸುವಲ್ಲಿ ಎಲ್ಲ ಶಿಕ್ಷಕ ವೃಂದ ಹಾಗೂ ಪಾಲಕರ ಜವಾಬ್ದಾರಿಯೂ ಇದೆ ಎಂದರು.
ಶಂಕರ ಲಮಾಣಿ ಮಾತನಾಡಿ, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಗುವಿನ ಬೌದ್ಧಿಕ ಸಾಮರ್ಥ್ಯ ಹೆಚ್ಚುವ ಜತೆಗೆ ಅವರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಗಮನ ಸೆಳೆದ ಲಂಬಾಣಿ ವೇಷಭೂಷಣ : ಕಾರ್ಯಕ್ರಮದಲ್ಲಿ ಒಟ್ಟು 12 ಶಾಲೆ ಮಕ್ಕಳು, ಆಶುಭಾಷಣ, ಕಂಠಪಾಠ, ಅಭಿನಯ ಗೀತೆ, ದೇಶ ಭಕ್ತಿ ಗೀತೆ, ಲಘು ಸಂಗೀತ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳು ವಿಭಿನ್ನ ರೀತಿಯಲ್ಲಿ ಲಂಬಾಣಿ ಸಂಪ್ರದಾಯ ಪದಗಳ ವೇಷಭೂಷಣಗಳನ್ನು ತೊಟ್ಟು ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದರು. ವೀರಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ನಿಂಗನಗೌಡ ಖೇಮನಾಯಕ ಅಧ್ಯಕ್ಷತೆ ವಹಿಸಿದ್ದರು. ಗುಜಾಬಾಯಿ ರಾಠೋಡ, ಭೀಮಪ್ಪ ಲಮಾಣಿ, ಶಂಕರ ಲಮಾಣಿ, ಚಂದ್ರಪ್ಪ ಪಮ್ಮಾರ, ಅನುಷಾಬಾಯಿ ಲಮಾಣಿ, ಪಿಡಿಒ ಎಸ್.ಎಸ್. ಅಡಾಲಟ್ಟಿ, ಮಂಜುಳಾ ಮಾನ್ವಿ, ತ್ರಿವೇಣಿ ಶೆಟ್ಟರ, ಎಸ್.ಕೆ.ಗಾಳಿ, ಸಾಬಣ್ಣ ಗೌಡರ, ತಮಸುಮ್ ಟಪಾಲವಾಲಿ, ಹುಸೇನ್‌ಸಾಬ ಚಿಕ್ಕೂರ, ಶ್ರೀಕಾಂತ ದಡಿ, ನರೇನೂರ ಕಸ್ಟರ್‌ನ ಎಲ್ಲ ಮುಖ್ಯಗುರುಗಳು, ಸಹ ಶಿಕ್ಷಕರು ಭಾಗವಹಿಸಿದ್ದರು.