ಜಿಲ್ಲೆ

ಆರೋಪಿಗಳ ಬಂಧನಕ್ಕೆ ನಾಕಾಬಂದಿ ಸಹಕಾರಿ

ಹೊನ್ನಾಳಿ: ಯಾವುದೇ ಅಪರಾಧ ಮಾಡಿ ಆರೋಪಿಗಳು ಪರಾರಿಯಾದ ಸಂದರ್ಭದಲ್ಲಿ ಪೊಲೀಸ್ ಉಪವಿಭಾಗದಲ್ಲಿ ಕೂಡಲೇ ನಾಕಾಬಂದಿ ಹಾಕುವ ಮೂಲಕ ಅವರನ್ನು ಶೀಘ್ರದಲ್ಲೇ ಸೆರೆ ಹಿಡಿಯಬಹುದು ಎಂದು ಇನ್ಸ್​ಪೆಕ್ಟರ್ ಸುನಿಲ್​ಕುಮಾರ್ ತಿಳಿಸಿದರು.

ಎಎಸ್​ಪಿ ಸ್ಯಾಂ ವರ್ಗೀಸ್ ನೇತೃತ್ವದಲ್ಲಿ ಭಾನುವಾರ ಚನ್ನಗಿರಿ ಉಪವಿಭಾಗದಲ್ಲಿ ಆಪರೇಷನ್ ರೆಡ್​ಡಾಟ್ ಹೆಸರಿನಲ್ಲಿ ಪೊಲೀಸ್ ನಾಕಾಬಂದಿ ಮೂಲಕ ಆರೋಪಿಗಳನ್ನು ಹಿಡಿಯುವ ಕಲ್ಪಿತ ಪ್ರದರ್ಶನದಲ್ಲಿ ಮಾತನಾಡಿದರು.

ಸರಗಳ್ಳತನ, ಕೊಲೆ, ವಾಹನ ಕಳ್ಳತನ ಸೇರಿ ಯಾವುದೇ ಅಪರಾಧ ಮಾಡಿ ಪರಾರಿಯಾದಾಗ ಕೂಡಲೇ ಉಪವಿಭಾಗಕ್ಕೆ ನಾಕಾಬಂದಿ ಹಾಕಬೇಕು. ಇದರಿಂದ ಆರೋಪಿಗಳನ್ನು ಸುಲಭವಾಗಿ ಸೆರೆ ಹಿಡಿಯಬಹುದು. ಆದರೆ ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಅಪರಾಧಗಳು ನಡೆದರೆ ಕೂಡಲೆ ಪೊಲೀಸರಿಗೆ ತಿಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಇತ್ತೀಚೆಗೆ ತಾಲೂಕಿನಾದ್ಯಂತ ರಾತ್ರಿ ಪೊಲೀಸ್​ಬೀಟ್ ಹೆಚ್ಚು ಮಾಡಿದ್ದೇವೆ, ಈಗ ಚಳಿ ಇರುವುದರಿಂದ ಸಾರ್ವಜನಿಕರು ಹೆಚ್ಚಾಗಿ ಹೊರ ಬರುವುದಿಲ್ಲ. ಇಂತಹ ಸಂದರ್ಭದಲ್ಲೇ ಅಪರಾಧಗಳು ಹೆಚ್ಚಾಗಿ ನಡೆಯುವುದು. ಹಾಗಾಗಿ ಸಾರ್ವಜನಿಕರು ಜಾಗರೂಕರಾಗಿರಬೇಕು. ಜತೆಗೆ ಅಪರಾಧದ ಬಗ್ಗೆ ಹೆಚ್ಚು ಗಮನ ವಹಿಸಬೇಕು ಎಂದರು.

ತಾಲೂಕಿನ ಸಾಸ್ವೇಹಳ್ಳಿ, ಕುಂದೂರು, ಹೊನ್ನಾಳಿ, ಸವಳಂಗ, ಹೊಳೆ ಹರಳಹಳ್ಳಿ, ಚೀಲೂರು, ಮಾವಿನಕಟ್ಟೆ ಸೇರಿ ನಗರದ ವಿವಿಧ ಕಡೆಗಳಲ್ಲಿ ನಾಕಾ ಬಂದಿ ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.