ವಿಜಯಪುರ: ತಿಕೋಟಾ ತಾಲೂಕಿನ ಟಕ್ಕಳಕಿ ಮತ್ತು ಸಿದ್ಧಾಪುರ (ಕೆ) ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಭೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳ ಕುರಿತ ಪರಿಶೀಲನೆ ನಡೆಸಿದರು.
ಟಕ್ಕಳಕಿ ಗ್ರಾಮದಲ್ಲಿರುವ ಗ್ರಾ.ಪಂ. ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾ.ಪಂ. ಅನುಷ್ಠಾನ ಮಾಡುವ ಮಹಾತ್ಮ ಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಯೋಜನೆ, ಎನ್‌ಆರ್‌ಎಲ್‌ಎಂ ಸೇರಿ ಮತ್ತಿತರ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿ, ಗ್ರಾ.ಪಂ. ವತಿಯಿಂದ ನಡೆಯುವ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರ ಜತೆಗೆ ಅರ್ಹರಿಗೆ ಅವಕಾಶ ನೀಡುವಂತೆ ಸೂಚಿಸಿದರು. ಅಲ್ಲದೆ, ಗ್ರಾಮದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಿ ಯಾವುದೇ ಸ್ಥಳದಲ್ಲಿ ತ್ಯಾಜ್ಯ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ನಂತರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟವನ್ನು ಪರಿಶೀಲಿಸಿದರು. ಬಿಸಿಯೂಟದಲ್ಲಿ ಹಾಗೂ ಅಡುಗೆ ಕೋಣೆಯಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡಲು ಶಿಕ್ಷಕ ಹಾಗೂ ಅಡುಗೆ ಸಹಾಯಕರಿಗೆ ಸೂಚನೆ ನೀಡಿದ ಅವರು, ಶಾಲೆಯ ಸಂಪೂರ್ಣ ಆವರಣವನ್ನು ಸ್ವಚ್ಛತೆಯಿಂದ ಕಾಪಾಡಬೇಕು. ಎಲ್ಲಿಯೂ ತ್ಯಾಜ್ಯ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ಶಾಲಾ ಆವರಣದಲ್ಲಿನ ಗ್ರಂಥಾಲಯ ಹಾಗೂ ಕೂಸಿನ ಮನೆ ಪರಿಶೀಲಿಸಿ, ಕೂಸಿನ ಮನೆ ಗ್ರಂಥಾಲಯದ ಕುರಿತ ಗ್ರಾಮದಲ್ಲಿ ವ್ಯಾಪಕ ಪ್ರಚಾರ ನಡೆಸುವಂತೆ ಪಿಡಿಒಗೆ ಸೂಚನೆ ನೀಡಿದರು.
ಬಳಿಕ ಸಿದ್ಧಾಪುರ (ಕೆ) ಗ್ರಾ.ಪಂ. ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು, ವಿವಿಧ ಯೋಜನೆಯ ಕಡತಗಳನ್ನು ಪರಿಶೀಲಿಸಿ ಎಲ್ಲೆಡೆ ಮಹಾಮಾರಿ ಡೆಂೆ ಹೆಚ್ಚಾಗಿ ಸದ್ದು ಮಾಡುತ್ತಿದೆ. ಹೀಗಾಗಿ ಗ್ರಾಮದಲ್ಲಿ, ವಸತಿ ನಿಲಯಗಳಲ್ಲಿ, ಶಾಲೆ-ಅಂಗನವಾಡಿ ಸಹಿತ ಎಲ್ಲಿಯೂ ಕೂಡ ತ್ಯಾಜ್ಯ ನೀರು ಶೇಖರಣೆಯಾಗದಂತೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ, ಶಾಲಾ ಅಡುಗೆ ಕೋಣೆಯಲ್ಲಿ ಬಳಸಿದ ತ್ಯಾಜ್ಯ ನೀರು ಸರಾಗವಗಿ ಹೊರಗಡೆ ಹೋಗುವಂತೆ ವ್ಯವಸ್ಥೆ ಮಾಡಲು ತಿಳಿಸಿದರು.
ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಟಕ್ಕಳಕಿ ಪಿಡಿಒ ಅಕ್ಕಮಹಾದೇವಿ ಪವಾರ, ಸಿದ್ಧಾಪುರ (ಕೆ) ಪಿಡಿಒ ಪದ್ಮಿನಿ ಬಿರಾದಾರ, ಗ್ರಾ.ಪಂ. ಸದಸ್ಯರು, ಸಿಬ್ಬಂದಿಗಳು ಮತ್ತಿತರರಿದ್ದರು.