ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಶೌಚಗೃಹಗಳ ದುರಸ್ತಿ ಕಾರ್ಯ ಕೈಗೊಂಡಿದ್ದು, ಗುರುವಾರ ಸ್ಥಳಕ್ಕೆ ಕಾರ್ಯದರ್ಶಿ ಎ.ಈ.ರಘು ಭೇಟಿ ನೀಡಿ ಪರಿಶೀಲಿಸಿದರು.
ಮ.ಬೆಟ್ಟದಲ್ಲಿನ ಕೆಲ ಶೌಚಗೃಹಗಳು ದುಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಪ್ರಾಧಿಕಾರದಿಂದ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಕೆಲವೆಡೆ ಭಕ್ತರು ಶೌಚಕ್ಕಾಗಿ ತೊಂದರೆ ಅನುಭವಿಸುವಂತಾಗಿತ್ತು. ಈ ದೃಶ್ಯವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅವರು ಶೌಚಗೃಹಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ದೀಪಾವಳಿ ಜಾತ್ರೆ ಇರುವುದರಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಆದ್ದರಿಂದ ಕೈಗೊಂಡಿರುವ ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ಈ ವೇಳೆ ಪ್ರಾಧಿಕಾರದ ಉಪ ಕಾರ್ಯದರ್ಶಿ ಜಿ.ಎಲ್.ಚಂದ್ರಶೇಖರ್, ಇಂಜಿನಿಯರ್ ಸೆಲ್ವ ಗಣಪತಿ ಇತರರು ಇದ್ದರು.
ಈ ಸಂಬಂಧ ಎ.ಈ.ರಘು ಮಾತನಾಡಿ, ದುರಸ್ಥಿತಿಯಲ್ಲಿದ್ದ ಶೌಚಗೃಹಗಳನ್ನು ಆಥುನಿಕ ರೀತಿಯಲ್ಲಿ ಗುಣಮಟ್ಟದಂತೆ ರೀಪೇರಿ ಕಾರ್ಯ ಕೈಗೊಳ್ಳಲಾಗಿದೆ. ಇನ್ನು ಮೂರ‌್ನಾಲ್ಕು ದಿನಗಳೊಳಗೆ ಪೂರ್ಣಗೊಳ್ಳಲಿದ್ದು, ಬಳಕೆಗೆ ಮುಕ್ತಗೊಳಿಸಲಾಗುವುದು. ಆದ್ದರಿಂದ ಭಕ್ತರು ಯಾವುದೇ ಗೊಂದಲಕ್ಕೆ ಕಿವಿಗೊಡದೇ ಪ್ರಾಧಿಕಾರದ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.