ಕೊಳ್ಳೇಗಾಲ ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿ ಆರಂಭಗೊಂಡಿರುವ ಸಿಸಿ ರಸ್ತೆ ಹಾಗೂ ಚರಂಡಿ ಅಬಿವೃದ್ಧಿ ಕಾಮಗಾರಿಯನ್ನು ಗುರುವಾರ ನಗರಸಭಾಧ್ಯಕ್ಷೆ ರೇಖಾ ರಮೇಶ್ ವೀಕ್ಷಿಸಿದರು. ಎ.ರಮೇಶ್, ಸ್ವಾಮಿ ನಂಜಪ್ಪ, ರಮೇಶ್, ರಾಜೇಂದ್ರ ಇದ್ದರು 
ಜಿಲ್ಲೆ

ರಸ್ತೆ, ಚರಂಡಿ ಕಾಮಗಾರಿ ಪರಿಶೀಲನೆ

ರವಿಕುಮಾರ್ ಪಿ. ಕೆ

ಕೊಳ್ಳೇಗಾಲ: ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿ ಆರಂಭಗೊಂಡಿರುವ ಸಿಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಯನ್ನು ಗುರುವಾರ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಹಾಗೂ ಪೌರಾಯುಕ್ತ ಎ.ರಮೇಶ್ ಪರಿಶೀಲಿಸಿದರು.

ಫೆ.21ರಂದು 2023-24ನೇ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ದೇವಲ ಮಹರ್ಷಿ ವೃತ್ತದಲ್ಲಿ 60ಮೀ. ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದ್ದರು. ನಾಲ್ಕೈದು ತಿಂಗಳಾದರು ಕಾಮಗಾರಿ ಆರಂಭಗೊಳ್ಳದ್ದರಿಂದ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದರು. ಅಲ್ಲದೆ, ಜು.15ರಂದು ನಗರಸಭೆ ಮಾಜಿ ನಾಮ ನಿರ್ದೇಶಿತ ಸದಸ್ಯ ಮಧುಚಂದ್ರ ಕಾಮಗಾರಿ ವಿಳಂಬ ಖಂಡಿಸಿ ಜು.17 ರಂದು ಕಾಮಗಾರಿ ನಡೆಯಬೇಕಿದ್ದ ರಸ್ತೆಯಲ್ಲಿಯೇ ಕುಳಿತು ಪ್ರತಿಭಟಿಸುವುದಾಗಿ ನಗರಸಭೆ ಪೌರಾಯುಕ್ತರಿಗೆ ಲಿಖಿತ ಪತ್ರವನ್ನು ನೀಡಿ ಎಚ್ಚರಿಸಿದ್ದರು.

ಈ ಹಿನ್ನೆಲೆ ಎಚ್ಚೆತ್ತ ನಗರಸಭೆ ಕಾಮಗಾರಿ ಆರಂಭಿಸಿದೆ. ಜೆಸಿಬಿ ಮೂಲಕ ಹಳೇ ರಸ್ತೆಯನ್ನು ತೆರವು ಗೊಳಿಸುವುದು ಹಾಗೂ ಚರಂಡಿ ನಿರ್ಮಾಣಕ್ಕೆ ಗುಂಡಿ ನಿರ್ಮಾಣ ಕಾಮಗಾರಿ ಕೈಗೊಂಡಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಫೆಬ್ರವರಿ ತಿಂಗಳಲ್ಲಿ ಎಸ್.ಎಫ್.ಸಿ ವಿಶೇಷ ಅನುದಾನ 2 ಕೋಟಿ ರೂ. ವೆಚ್ಚದಲ್ಲಿ ವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಚಾಲನೆ ನೀಡಿದ್ದರು. ಅದರಲ್ಲಿ ದೇವಲ ಮಹರ್ಷಿ ವೃತ್ತ ರಸ್ತೆ ಹಾಗೂ ಚರಂಡಿ ಕಾಮಗಾರಿಯೂ ಸೇರಿದೆ. ಕಾರಣಾಂತರದಿಂದ ಈ ಕಾಮಗಾರಿ ವಿಳಂಬವಾಗಿತ್ತು. ಇದೀಗ ಕಾಮಗಾರಿ ಆರಂಭವಾಗಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಗುರಿ ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಯಾಗಿದೆ. ಸದಾ ಕ್ಷೇತ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದಾರೆ ಎಂದರು.

ನಗರಸಭೆ ಪೌರಾಯುಕ್ತ ಎ.ರಮೇಶ್ ಮಾತನಾಡಿ, ಹಿಂದೆ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ 2 ಕೋಟಿ ರೂ. ಅನುದಾನದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ವಾರ್ಡ್‌ಗಳಲ್ಲಿ 20 ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಆದರೆ, ಈ ಕಾಮಗಾರಿಗಳಿಗೆ ಅನುದಾನ ಸಿಗುವುದಿಲ್ಲ ಎಂಬ ತಪ್ಪು ಅಭಿಪ್ರಾಯವನ್ನು ಗುತ್ತಿಗೆದಾರರು ಹೊಂದಿದ್ದಾರೆ. ಇದು ವಿಶೇಷ ಅನುದಾನವಾದ್ದರಿಂದ ಕೆಲಸ ಮುಗಿದ ಬಳಿಕ ಈ ಬಗ್ಗೆ ನಗರಸಭೆ ವರದಿ ನೀಡಿದರೆ ಸರ್ಕಾರ ಹಣ ನೀಡುತ್ತದೆ. ಹಣದ ಬಗ್ಗೆ ಗುತ್ತಿಗೆದಾರರು ಆತಂಕ ಪಡುವ ಅಗತ್ಯವಿಲ್ಲ. ಆದರೆ, ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ. ದೇವಲ ಮಹರ್ಷಿ ವೃತ್ತದ ಕಾಮಗಾರಿ 10 ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ನಗರಸಭೆಯ 31ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ. ಆದರೆ, ಫಲಕದಲ್ಲಿ ಇನ್ನು ಮಾಜಿ ಶಾಸಕ ಎನ್.ಮಹೇಶ್, ಸಂಸದ ಶ್ರೀನಿವಾಸ್‌ಪ್ರಸಾದ್ ಹೆಸರಿದೆ. ಇದು ಬದಲಾಗುವುದು ಯಾವಾಗ, ಹಿಂದೆ ಸಾಮಾನ್ಯ ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಫಲಕದಲ್ಲಿ ಹೊಸ ಸಂಸದರು, ಶಾಸಕರ ಹೆಸರು ಬರೆಯಿಸಿ ಎಂದು ತಾಕೀತು ಮಾಡಿದ್ದರು. ಆದರೆ ಕೆಲಸವಾಗಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಪೌರಾಯುಕ್ತರ ಎ.ರಮೇಶ್ ಪ್ರತಿಕ್ರಿಯಿಸಿ, ಈಗಾಗಲೇ ಮಾಹಿತಿ ಫಲಕಗಳಿಗೆ ಬಿಳಿ ಬಣ ಹೊಡಿಸಲಾಗಿದೆ. ಜರೂರಾಗಿ ಎಲ್ಲ ಫಲಕಗಳಿಗೂ ಹೊಸ ಸಂಸದ, ಶಾಸಕರ ಹಾಗೂ ಸದಸ್ಯರ ಮಾಹಿತಿ ಬರೆಸಲಾಗುತ್ತದೆ ಎಂದರು. ಅಲ್ಲದೆ, ಬಿಡಾಡಿ ದನಗಳ ಹಾವಳಿ ತಡೆಗೆ ಕಾರ್ಯಾಚರಣೆ ಹಾಗೂ ಪ್ಲಾಸ್ಟಿಕ್‌ಬಳಕೆ, ಕೃತಕ ಕಲರ್ ಬಳಕೆ ಹಾಗೂ ಶುಚಿತ್ವವಿರದ ಹೋಟೆಲ್, ಬೇಕರಿ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ ಕ್ರಮವಹಿಸಲಾಗುವುದು ಎಂದರು.