ಆರ್.ಎಸ್. ದೊಡ್ಡಿ ಬಳಿ ಒತ್ತುವರಿಯಾಗಿದ್ದ ಸಾರ್ವಜನಿಕ ಸ್ಮಶಾನ ಜಾಗವನ್ನು ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಪರಿಶೀಲಿಸಿದರು. ಶಶಿಕುಮಾರ್, ಮಹೇಶ್, ಶೇಷಣ್ಣ, ಬಸವರಾಜು, ಕಾಮಶೆಟ್ಟಿ ಇತರರು ಇದ್ದರು.  
ಜಿಲ್ಲೆ

ಒತ್ತುವರಿಯಾದ ಸಾರ್ವಜನಿಕ ಸ್ಮಶಾನ ಪರಿಶೀಲನೆ

ಶಿವಶಂಕರ್ ಎಂ. ಹೆಬ್ಬಳ್ಳ

ಹನೂರು : ಆರ್.ಎಸ್. ದೊಡ್ಡಿ ಮುಖ್ಯ ರಸ್ತೆಯ ಬದಿಯ ಸಾರ್ವಜನಿಕ ಸ್ಮಶಾನ ಜಾಗವನ್ನು ವ್ಯಕ್ತಿಯೊಬ್ಬರು ಒತ್ತುವರಿ ಮಾಡಿಕೊಂಡು ಜಮೀನಾಗಿ ಪರಿವರ್ತಿಸಿಕೊಂಡಿದ್ದ ಸ್ಥಳಕ್ಕೆ ಗುರುವಾರ ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಲ್ಲೇಪುರ ಗ್ರಾಮದ ಸರ್ವೇ ನಂ.739ರಲ್ಲಿ 2 ಎಕರೆ 94 ಸೆಂಟ್ ಜಮೀನಿನ ಪೈಕಿ 40 ಸೆಂಟ್ ಜಾಗವನ್ನು ಸರ್ಕಾರ 2023ರಲ್ಲಿ ಆರ್.ಎಸ್.ದೊಡ್ಡಿ ಗ್ರಾಮಸ್ಥರಿಗೆ ಸಾರ್ವಜನಿಕ ಸ್ಮಶಾನಕ್ಕೆ ಮಂಜೂರು ಮಾಡಿತ್ತು. ಆದರೆ ಈ ಜಾಗದ ಸಮೀಪದಲ್ಲಿ ಜಮೀನನ್ನು ಹೊಂದಿದ್ದ ಖಾಸಗಿ ವ್ಯಕ್ತಿಯೊಬ್ಬರೂ 40 ಸೆಂಟ್ ಜಾಗವನ್ನು ಒತ್ತುವರಿ ಮಾಡಿಕೊಂಡು ಕೃಷಿ ಭೂಮಿಯಾಗಿ ಪರಿವರ್ತಿಸಿಕೊಂಡಿದ್ದರು. ಗ್ರಾಮದಲ್ಲಿ ಈವೆರಗೂ ಮೃತಪಟ್ಟವರನ್ನು ಅವರವರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ಗುರುವಾರ ಗ್ರಾಮದಲ್ಲಿ ನಿಧನ ಹೊಂದಿದ ವೆಂಕಟರಮಣಶೆಟ್ಟಿ ಎಂಬುವರಿಗೆ ಜಮೀನು ಇಲ್ಲದ ಕಾರಣ ಗ್ರಾಮಸ್ಥರು ಸ್ಮಶಾನ ಜಾಗವನ್ನು ಪರಿಶೀಲಿಸಿದಾಗ ಒತ್ತುವರಿಯಾಗಿರುವುದು ಗಮನಕ್ಕೆ ಬಂತು. ಈ ಬಗ್ಗೆ ತಹಸೀಲ್ದಾರ್ ಅವರ ಗಮನಕ್ಕೆ ತಂದು ಸ್ಮಶಾನ ಜಾಗವನ್ನು ತೆರವುಗೊಳಿಸಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.

ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ನಕಾಶೆ ಪರಿಶೀಲಿಸಿ ಒತ್ತುವರಿಯಾಗಿರುವುದನ್ನಯ ಗುರುತಿಸಿದರು. ಸೆ.9 ರಂದು ಸರ್ವೇ ಕಾರ್ಯ ನಡೆಸಿ ಒತ್ತುವರಿಯನ್ನು ತೆರವುಗೊಳಿಸಲಾಗುವುದು. ಈ ವೇಳೆ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಸ್ಥಳದಲ್ಲಿರುವಂತೆ ಸೂಚಿಸಿದರು. ಬಳಿಕ ಜಮೀನಿನ ಸಮೀಪ ಅಂತ್ಯಸಂಸ್ಕಾರ ನೆರವೇರಿಸುವಂತೆ ಗ್ರಾಮಸ್ಥರಿಗೆ ಸೂಚಿಸಿದರು. ಸರ್ವೇ ಕಾರ್ಯ ಬಳಿಕ ಸ್ಮಶಾನ ಜಾಗಕ್ಕೆ ಎಲ್ಲೆಯನ್ನು ಗುರ್ತಿಸಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು ಎಂದು ಭರವಸೆ ನೀಡಿದರು.

ಇನ್‌ಸ್ಪೆಕ್ಟರ್ ಶಶಿಕುಮಾರ್, ಪ್ರಭಾರ ಆರ್‌ಐ ಶೇಷಣ್ಣ, ಪಪಂ ಸದಸ್ಯ ಮಹೇಶ್, ಗ್ರಾಮದ ಮುಖಂಡರಾದ ಬಸವರಾಜು, ಕಾಮಶೆಟ್ಟಿ, ಸಿದ್ದಪ್ಪ, ಜಯರಾಜಶೆಟ್ಟಿ, ಕಾಮರಾಜು, ರಂಗಸ್ವಾಮಿ, ಸುರೇಂದ್ರ, ಮುತ್ತುರಾಜು ಹಾಗೂ ಇನ್ನಿತರರು ಇದ್ದರು.