ಹುಣಸೂರು: ತಾಲೂಕಿನಲ್ಲಿ ನರೇಗಾ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡಿರುವ ಸ್ಥಳಗಳಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಭೀಮಪ್ಪ ಕೆ.ಲಾಳಿ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ತಾಲೂಕಿನ ಮರದೂರು ಹಾಗೂ ಕೊತ್ತೇಗಾಲ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಗುರುವಾರ ತಾ.ಪಂ. ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿದರು.
ಮರದೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾದಿಂದ ಅನುಷ್ಠಾನಗೊಂಡಿರುವ ಸಂಜೀವಿನಿ ಘಟಕ ಮತ್ತು ಗೋದಾಮು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಡಲೇ ಒಕ್ಕೂಟ ಮತ್ತು ರೈತರ ಬಳಕೆಗೆ ಒದಗಿಸುವಂತೆ ತಿಳಿಸಿದರು.
2025-26ನೇ ಸಾಲಿನಲ್ಲಿ ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳ ಪಟ್ಟಿ ಹಾಗೂ 2022-23ನೇ ಸಾಲಿನಿಂದ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಮುಕ್ತಾಯ ವರದಿ ಸಲ್ಲಿಸದೇ ಬಾಕಿ ಉಳಿಸಿಕೊಂಡಿರುವುದರ ಕುರಿತು ಸಮಜಾಯಿಷಿ ಕೇಳಿದರು. ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿಸಿದಾಗ ಬಗೆಹರಿಸಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಮುಕ್ತಾಯ ವರದಿ ಹಾಕುವಂತೆ ಪಿಡಿಒಗೆ ತಾಕೀತು ಮಾಡಿದರು.
ಹಗರನಹಳ್ಳಿ ಮತ್ತು ಶ್ರವಣಹಳ್ಳಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿ ನಿರ್ವಹಣೆ, ಸ್ಮಶಾನ ಅಭಿವೃದ್ಧಿ, ಬೂದು ನೀರು ನಿರ್ವಹಣೆ ಮತ್ತು ಕಾಮಗಾರಿ ಹಂತದಲ್ಲಿರುವ ನೀರುಗಾಲುವೆ ಅಭಿವೃದ್ಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೂಸಿನ ಮನೆಗೆ ಭೇಟಿ: ಕೊತ್ತೇಗಾಲ ಗ್ರಾಮ ಪಂಚಾಯಿತಿಯ ಕೊತ್ತೇಗಾಲ ಗ್ರಾಮದ ಕೂಸಿನ ಮನೆಗೆ ಭೇಟಿ ನೀಡಿ ಸರ್ಕಾರದ ಮಕ್ಕಳ ಲಾಲನೆ ಪಾಲನೆಗೆ ಯಾವುದೇ ತೊಡಕಾಗದಂತೆ ಕೂಸಿನ ಮನೆ ನಿರ್ವಹಿಸಬೇಕೆಂದು ಸೂಚಿಸಿದರು.
ರಸ್ತೆ ಬದಿ ನೆಡು ತೋಪಿನ ನಾಲ್ಕನೇ ವರ್ಷದ ಕಾಮಗಾರಿ ನಿರ್ವಹಣೆ ಹಾಗೂ ಕಲ್ಯಾಣಿ ಅಭಿವೃದ್ಧಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸಲಹೆ ನೀಡಿದರು. ಜಿ.ಪಂ.ಸಹಾಯಕ ಯೋಜನಾಧಿಕಾರಿ ಶಿವಕುಮಾರ್, ನರೇಗಾ ಸಹಾಯಕ ನಿರ್ದೇಶಕ ಎಸ್.ಗಿರಿಧರ್, ತಾಂತ್ರಿಕ ಸಂಯೋಜಕ ಅರವಿಂದ್.ಎಂ, ಐಇಸಿ ಸಂಯೋಜಕಿ ಪುಷ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಧಮೇರ್ಂದ್ರ, ಮಂಜುನಾಥ್, ತಾಂತ್ರಿಕ ಇಂಜಿನಿಯರ್‌ಗಳಾದ ನಂದಶ್ರೀನಿವಾಸ್, ಜೆ.ಮದನ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಇದ್ದರು.