ಹುಮನಾಬಾದ್: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ನರೇಗಾ ಯೋಜನೆ ಗ್ರಾಮದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕಿನ ದುಬಲಗುಂಡಿ, ಜಲಸಂಗಿ, ನಂದಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯಡಿ ಕಾಮಗಾರಿಗಳ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ನರೇಗಾ ಯೋಜನೆ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಮುಖಾಂತರ ಗ್ರಾಮದ ಜನ, ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿರುವ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳು ಸಮರ್ಪಕವಾಗಿ ತಲುಪಿಸಲು ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.
ರೈತರ ಹೊಲ ಗದ್ದೆಗೆ ಹೋಗಲು ನರೇಗಾ ಯೋಜನೆಯಡಿ ನಮ್ಮ ಹೊಲ ನಮ್ಮ ರಸ್ತೆ ನಿರ್ಮಾಣ ಮಾಡಬೇಕು ಮತ್ತು ಗ್ರಾಮೀಣ ಭಾಗದ ನೊಂದಾಯಿತ ಪ್ರತಿಯೊಂದು ಕುಟುಂಬಕ್ಕೆ ಕನಿಷ್ಠ ೧೦೦ ದಿನ ಕೆಲಸ ನೀಡುವ ಜತೆಗೆ ಗ್ರಾಮೀಣ ಭಾಗದ ಆಸ್ತಿಗಳು ರಚಿಸುವಲ್ಲಿ ನರೇಗಾ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ನರೇಗಾ ಯೋಜನೆಯಲ್ಲಿ ಬರುವ ಕಾಮಗಾರಿಗಳ ಲಾಭವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ, ಸಹಾಯಕ ನಿರ್ದೇಶಕ (ಉಖಾ) ಜಗನ್ನಾಥ, ಸಹಾಯಕ ನಿರ್ದೇಶಕಿ (ಪಂರಾ) ಶಿವಲೀಲಾ, ಗ್ರಾಪಂ ಜನಪ್ರತಿನಿಧಿಗಳು, ಪಿಡಿಒ ಮತ್ತು ಗ್ರಾಮಸ್ಥರು ಇದ್ದರು.