ಕೆಂಗೇರಿ: ವಾಸದ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾಗುತ್ತಿರುವ ಬಹುಮಹಡಿ ಕಟ್ಟಡದ ಕಾಮಗಾರಿ ಕಳಪೆಯಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲಾಗುವುದು ಎಂದು ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನೆಲಗುಳಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮುಖ್ಯಮಂತ್ರಿಗಳ 1 ಲಕ್ಷ ಮನೆ ಯೋಜನೆಯಡಿ ನಿರ್ಮಿಸಲಾಗುತ್ತಿರುವ 1,552 ಮನೆಗಳ ಬಹುಮಹಡಿ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಮಧ್ಯಮ ವರ್ಗದ ವಸತಿರಹಿತರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈ ಕಟ್ಟಡಗಳು ಬಹುವರ್ಷಗಳ ಕಾಲ ಬಾಳಿಕೆ ಬರಬೇಕು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಕೆಲಸ ಮಾಡಿಸಬೇಕು ಎಂದು ತಾಕೀತು ಮಾಡಿದರು.
ಶಾಸಕ ಎಸ್.ಟಿ. ಸೋಮಶೇಖರ್ ಮಾತನಾಡಿ, ವಸತಿಗಾಗಿ ಯಶವಂತಪುರ ಕ್ಷೇತ್ರದ ಜನರು ಅರ್ಜಿ ಸಲ್ಲಿಸಿದ್ದು, ಆದ್ಯತೆ ಮೇರೆಗೆ ಸೌಲಭ್ಯ ವಿತರಿಸಬೇಕು. ಕಾಮಗಾರಿ ಮುಗಿದ ಕೂಡಲೇ ಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಬಡವರಿಗೆ ಮನೆ ಹಂಚಿಕೆ ಮಾಡಿಸಲಾಗುವುದು ಎಂದು ತಿಳಿಸಿದರು.
ವಸತಿ ಇಲಾಖೆ ಕಾರ್ಯದರ್ಶಿ ಕುಮಾರ್, ಕೆಎಂಡಿಸಿ ಅಧ್ಯಕ್ಷ ಅಲ್ತಫಾ ಖಾನ್, ನಿಗಮದ ಅಧಿಕಾರಿ ಪರಶುರಾಮ್, ಮುಖಂಡರು ಉಪಸ್ಥಿತರಿದ್ದರು.