ಜಿಲ್ಲೆ

ಎಥೆನಾಲ್ ಘಟಕ ಸ್ಥಾಪನೆಗೆ ಪರಿಶೀಲನೆ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಎಥೆನಾಲ್ ಘಟಕವನ್ನು ಸ್ಥಾಪಿಸುವ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಈ ಕುರಿತು ಸೂಕ್ತ ತೀರ್ಮಾನಕ್ಕಾಗಿ ಸಚಿವ ಸಂಪುಟ ಸಭೆಗೆ ಮಂಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಅವರು ಮಂಗಳವಾರ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, 2024-25ನೇ ಸಾಲಿನ ಆಯವ್ಯಯದಲ್ಲಿ ಮೈಷುಗರ ಕಾರ್ಖಾನೆ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸಲಾಗುವುದು. ಸರ್ಕಾರದ ಅನುದಾನ, ಇತರೆ ಮೂಲಗಳಲ್ಲಿ ಸಂಪನ್ಮೂಲವನ್ನು ಕ್ರೋಡೀಕರಿಸಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಇದರ ಅನುಷ್ಠಾನದ ಭಾಗವಾಗಿ ಕಾರ್ಖಾನೆಯಲ್ಲಿ ಎಥನಾಲ್ ಘಟಕದ ಸ್ಥಾಪನೆ, ಹೊಸ ಮಿಲ್ ಬಾಯ್ಲರ್ ಘಟಕ ಅಳವಡಿಕೆ ಹಾಗೂ ಹಾಲಿ ಇರುವ ಸಕ್ಕರೆ ಉತ್ಪಾದನಾ ವಿಭಾಗವನ್ನು ಆಧುನೀಕರಣಗೊಳಿಸುವ ಪ್ರಸ್ತಾವನೆಯನ್ನು ಸಹ ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯವರು ಸಿದ್ಧಪಡಿಸಿರುವ ಪರಿಷ್ಕೃತ ವಿಸ್ತೃತಾ ಯೋಜನಾ ವರದಿಯನ್ನು ಮೈಷುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವರದಿಯಲ್ಲಿ ಮೈಷುಗರ್‌ನಲ್ಲಿ 80 ಕೆ.ಎಲ್.ಪಿ.ಡಿ. ಎಥನಾಲ್ ಘಟಕವನ್ನು ಸ್ಥಾಪಿಸುವ ಮತ್ತು 5,000 ದಿನವಹಿ ಕಬ್ಬು ಅರೆಯುವ ಸಾರ್ಮಥ್ಯದ (ಟಿ.ಸಿ.ಡಿ) ಯಂತ್ರೋಪಕರಣ ಅಳವಡಿಕೆ ಕುರಿತ ಪ್ರಸ್ತಾನವೆಗೆ ಈಗಾಗಲೇ ಆರ್ಥಿಕ ಮತ್ತು ಯೋಜನಾ ಇಲಾಖೆಗಳ ಅಭಿಪ್ರಾಯವನ್ನು ಪಡೆಯಲಾಗಿದೆ. ಅಂತೆಯೇ ಸೂಕ್ತ ತೀರ್ಮಾನಕ್ಕಾಗಿ ಸಚಿವ ಸಂಪುಟ ಸಭೆಗೆ ಮಂಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಉತ್ತರಿಸಿದ್ದಾರೆ.