ಚಿಕ್ಕಮಗಳೂರು ಎಸ್‌ಪಿ ಅವರ ಸಹಾಯಕ ಸುದೇಶ್ ಕಿಣಿ ಅವರಿಗೆ ಮನವಿ ಸಲ್ಲಿಸಿದ ಸಖರಾಯಪಟ್ಟಣ ಹೋಬಳಿಯ ಡಿ.ಕಾರೇಹಳ್ಳಿಯ ಬೋವಿ ಕಾಲನಿನ ನಿವಾಸಿಗಳು ಗ್ರಾಮದಲ್ಲಿ ಶಾಂತಿಯುತ ವಾತಾವರಣ ಕದಡುವ ಮೂಲಕ ಗ್ರಾಮಸ್ಥರ ನೆಮ್ಮದಿಗೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 
ಜಿಲ್ಲೆ

ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮಸ್ಥರ ಒತ್ತಾಯ

ಚಿಕ್ಕಮಗಳೂರು: ಡಿ.ಕಾರೇಹಳ್ಳಿ ಗ್ರಾಮದಲ್ಲಿ ಶಾಂತಿಯುತ ವಾತಾವರಣ ಕದಡುವ ಮೂಲಕ ಗ್ರಾಮಸ್ಥರ ನೆಮ್ಮದಿಗೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿ.ಕಾರೇಹಳ್ಳಿ ಗ್ರಾಮ ಸ್ಥರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ಎಸ್‌ಪಿ ಕಚೇರಿಗೆ ಶನಿವಾರ ಮನವಿ ಸಲ್ಲಿಸಿದರು.

ಎಸ್‌ಪಿ ಅವರ ಸಹಾಯಕ ಸುದೇಶ್ ಕಿಣಿ ಅವರಿಗೆ ಮನವಿ ಸಲ್ಲಿಸಿದ ಸಖರಾಯಪಟ್ಟಣ ಹೋಬಳಿಯ ಡಿ.ಕಾರೇಹಳ್ಳಿಯ ಬೋವಿ ಕಾಲನಿನ ನಿವಾಸಿಗಳು, ನಮ್ಮ ಮೇಲೆ ಕೆಲವರು ದೌರ್ಜನ್ಯ ನಡೆಸುವ ಜೊತೆಗೆ ದ್ವೇಷದ ಕಿಡಿ ಹತ್ತಿಸುತ್ತಿದ್ದಾರೆ. ಇಂಥವರ ವಿರುದ್ಧ ಕ್ರಮ ಜರುಗಿಸುವ ಮೂಲಕ ನೆಮ್ಮದಿಯಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ಚಿಕ್ಕದೇವನೂರು ಗ್ರಾಪಂ ವ್ಯಾಪ್ತಿಯ ಡಿ.ಕಾರೇಹಳ್ಳಿ ಬೋವಿ ಕಾಲನಿ ನಿವಾಸಿಗಳು ಸುಮಾರು ಐದು ದಶಕಗಳಿಂದ ಸೌಹಾರ್ದತೆಯಿಂದ ಜೀವನ ಸಾಗಿಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಸ್ಥಳೀಯ ಕೆಲವು ಕಾಂಗ್ರೆಸ್ ಮುಖಂಡರುಗಳು ಕಾಲನಿಯಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ಕೆಲವು ಕಾಂಗ್ರೆಸ್ ಬೆಂಬಲಿಗರು ಗುಂಪುಗಾರಿಕೆ ಮಾಡಿಕೊಂಡು ಗ್ರಾಮಸ್ಥರು ಹಾಗೂ ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ, ಗಲಭೆ ಮತ್ತು ದೌರ್ಜನ್ಯವೆಸಗುತ್ತಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳನ್ನು ಮುಂದಿಟ್ಟು ತಪ್ಪು ಮಾರ್ಗದರ್ಶನ ನೀಡಿ, ರಾಜಕೀಯ ಪ್ರಭಾವದಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದರು.
ಡಿ.ಕಾರೇಹಳ್ಳಿಯ ನಿವಾಸಿಗಳಿಗೆ ವಾಹನದಲ್ಲಿ ಗುದ್ದಿಸುವುದು, ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಂಡು ರಾಜಕೀಯ ಕಿಚ್ಚು ಹಚ್ಚಿಸುವುದು ಸೇರಿದಂತೆ ಅನೇಕ ರೀತಿಯ ತೊಂದರೆ ನೀಡಲಾಗುತ್ತಿದೆ. ಇದರಿಂದ ಗ್ರಾಮಸ್ಥರು ನೆಮ್ಮದಿ ಜೀವನ ನಡೆಸಲಾಗದೆ ಪರಸ್ಪರ ಗಲಭೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಗ್ರಾಮದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಧ್ಯಪ್ರವೇಶಿಸಬೇಕು. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ತುಂಬಾ ಅವಶ್ಯಕವಾಗಿದೆ. ವಿಳಂಭ ಧೋರಣೆ ಅನುಸರಿಸಿದರೆ ಕಾನೂನು ಹೋರಾಟ ನಡೆಸುವ ಜೊತೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಕೇಶವ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಡಿ.ಎಂ.ಮAಜು, ಡಿ.ಕಾರೇಹಳ್ಳಿ ಗ್ರಾಪಂ ಸದಸ್ಯರಾದ ರವಿ, ಅಣ್ಣಪ್ಪ, ಗ್ರಾಮಸ್ಥರಾದ ಕೃಷ್ಣಮೂರ್ತಿ, ಸ್ವಾಮಿ, ಉಮೇಶ್, ಭರತ್, ನವೀನ, ಧರ್ಮರಾಜ್ ಮತ್ತಿತರರಿದ್ದರು.