ಬೆಂಗಳೂರು : ಕನ್ನಡ ಚಲನಚಿತ್ರ ರಂಗಕ್ಕೆ ಅಮೋಘ ಕೊಡುಗೆ ನೀಡಿರುವ ನಟ ಡಾ.ವಿಷ್ಣುವರ್ಧನ್ ಜನ್ಮ ದಿನವನ್ನು ರಾಷ್ಟ್ರೀಯ ಆದರ್ಶ ದಿನವನ್ನಾಗಿ ಘೋಷಣೆಯಾಗಬೇಕು ಎಂದು ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಡಾ.ವಿಷ್ಣುವರ್ಧನ್ ಜನ್ಮ ದಿನಾಚರಣೆ ಅಂಗವಾಗಿ ಭಾರತೀಯ ಆಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಜನರಲ್ ಬೆಂಗಳೂರು ವೃತ್ತ ಶುಕ್ರವಾರ ಮೇಘದೂತ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಆಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಜನತೆ ಸೇರಿ ಎಲ್ಲರಿಗೂ ವಿಷ್ಣುವರ್ಧನ್ ಆದರ್ಶರಾಗಿದ್ದರು. ಮಹಿಳೆಯರಿಗೆ ಅಪಾರ ಗೌರವ ಕೊಡುತ್ತಿದ್ದರು. ಗಂಡು ಮಗವನ್ನು ದತ್ತು ಪಡೆದುಕೊಳ್ಳದೆ ಹೆಣ್ಣು ಮಗುವನ್ನು ದತ್ತು ಪಡೆದು ಆದರ್ಶರಾಗಿದ್ದಾರೆ. ಆದ್ದರಿಂದ, ವಿಷ್ಣು ಜನ್ಮದಿನವನ್ನು ರಾಷ್ಟ್ರೀಯ ಆದರ್ಶ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕಾರ್ಯಕ್ರಮ ರೂಪಿಸಬೇಕು ಎಂದು ಶ್ರೀನಿವಾಸ್ ಹೇಳಿದರು.
ಸಂಸಾರದಲ್ಲಿ ವೈಮನಸ್ಸು ಮೂಡಿದ್ದಾಗ ನಮಗೆ ತಿಳಿ ಹೇಳಿ ಆದರ್ಶ ದಂಪತಿಗಳಾಗಿ ಜೀವನ ನಡೆಸುವಂತೆ ವಿಷ್ಣು ವರ್ಧನ್ ಮಾರ್ಗದರ್ಶನ ಮಾಡಿದ್ದರು. ಜೋಗಿ ಚಿತ್ರ ನೋಡಿ ಮೆಚ್ಚಿಕೊಂಡಿದ್ದ ಅವರು ಕಥೆ ಬರೆದು ನಿರ್ದೇಶನ ಮಾಡುವಂತೆ ಹೇಳಿದ್ದರು. ಆದರೆ, ಅಷ್ಟರೊಳಗೆ ಇಹಲೋಕ ತ್ಯಜಿಸಿದ್ದರು ಎಂದು ನಟ ಮತ್ತು ನಿರ್ದೇಶಕ ಪ್ರೇಮ್ ಬೇಸರ ವ್ಯಕ್ತಪಡಿಸಿದರು. ದಕ್ಷಿಣ ಕರ್ನಾಟಕ ಅಂಚೆ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ ಮತ್ತಿತರರಿದ್ದರು.