ಆನೇಕಲ್: ಖಾಸಗಿ ಜಮೀನಿನ ಮಾಲೀಕ ಬಂದ್ ಮಾಡಿರುವ ಮಾರ್ಗ ತೆರವುಗೊಳಿಸಿ ಓಡಾಟಕ್ಕೆ ಮುಕ್ತಗೊಳಿಸಬೇಕೆಂದು ಚಂದಾಪುರ ಪುರಸಭೆ ವ್ಯಾಪ್ತಿಯ ಹೆಡ್‌ಮಾಸ್ಟರ್ ಬಡಾವಣೆ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಜಮೀನು ಮಾಲೀಕ ಮಲ್ಲೇಶ್‌ರೆಡ್ಡಿ ಎಂಬುವವರು ಜಮೀನಿನಲ್ಲಿ ಪುರಸಭೆ ಕಸ ಸುರಿಯುತ್ತಿದೆ ಎಂದು ಎರಡು ದಿನಗಳ ಹಿಂದೆ ರಸ್ತೆ ಬಂದ್ ಮಾಡಿದ್ದಾರೆೆ. ಇದರಿಂದ ಬಡಾವಣೆಯ ಜನರು ಓಡಾಡಲು ತೊಂದರೆಯುಂಟಾಗಿದ್ದು, ಪುರಸಭೆ ಅಧಿಕಾರಿಗಳು ಶೀಘ್ರ ರಸ್ತೆಯನ್ನು ಓಡಾಟಕ್ಕೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೆಡ್ ಮಾಸ್ಟರ್ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಕೆ.ವೇಣು ಒತ್ತಾಯಿಸಿದರು.
ಹಲವಾರು ವರ್ಷಗಳಿಂದ ಈ ರಸ್ತೆಯನ್ನೇ ನಂಬಿ ನಾವು ಕೂಡ ಮನೆ ಖರೀದಿ ಮಾಡಿದ್ದೇವೆ. ಆದರೆ ಈಗ ಏಕಾಏಕಿ ರಸ್ತೆ ಬಂದ್ ಮಾಡಿರುವುದರಿಂದ ಸಮಸ್ಯೆ ಉಂಟಾಗಿದೆ. ಸಂಬಂಧಪಟ್ಟ ಚಂದಾಪುರ ಪುರಸಭೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಬಡಾವಣೆಯ ನಿವಾಸಿ ಭಾಗ್ಯಲಕ್ಷ್ಮೀ ಹೇಳಿದರು.
50 ವರ್ಷದಿಂದ ಸುಮ್ಮನಿದ್ದು, ಬಡಾವಣೆ ಪಕ್ಕದ ಜಮೀನು ನನ್ನದು ಎಂದು ಹೇಳುತ್ತಿರುವ ಮಾಲೀಕರು ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಸಮಸ್ಯೆ ಏನೇ ಇದ್ದರೂ ಅದನ್ನು ಪುರಸಭೆ ಅಧಿಕಾರಿಗಳ ಜತೆ ಕುಳಿತು ಬಗೆಹರಿಸಿಕೊಳ್ಳಬೇಕು, ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಬಡಾವಣೆ ನಿವಾಸಿ ವೇಣು ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಮಹದೇವಯ್ಯ ಮಾತನಾಡಿ, ಬಡಾವಣೆಯ ನಕ್ಷೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘದ ಸದಸ್ಯ ಹರೀಶ್, ಸುರೇಶ್, ಮಹೇಶ್, ರೈತ ಸಂಘದ ಮುಖಂಡ ವೆಂಕಟಸ್ವಾಮಿ ರೆಡ್ಡಿ, ರೇಣುಕಾರಾಧ್ಯ, ನಾಗರಾಜ್, ನರೇಂದ್ರಬಾಬು, ಉಮೇಶ್, ಕನ್ನಡಪರ ಸಂಘಟನೆಯ ಮುಖಂಡ ನಾರಾಯಣ ಇದ್ದರು.
50 ವರ್ಷದಿಂದಲೂ ನನ್ನ ಜಮೀನಿನಲ್ಲಿ ಜನ ಓಡಾಡಲಿ ಎನ್ನುವ ಕಾರಣದಿಂದ ಮಾನವೀಯತೆ ಮೇರೆಗೆ ರಸ್ತೆ ಬಿಟ್ಟಿದ್ದೆ. ಆದರೆ ಚಂದಾಪುರ ಪುರಸಭೆ ಅಧಿಕಾರಿಗಳು ನನ್ನ ಜಮೀನಿನಲ್ಲಿಯೇ ಕಸವನ್ನು ಸುರಿಯಲು ಮುಂದಾಗಿದ್ದು, ಇದನ್ನು ಕೇಳಲು ಹೋದ ನನ್ನ ಮೇಲೆ ಸೂರ್ಯನಗರದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಜಮೀನಿನಲ್ಲಿ ದಾರಿ ಬಿಡುವುದಿಲ್ಲ. ಮಲ್ಲೇಶ್‌ರೆಡ್ಡಿ, ಜಮೀನು ಮಾಲೀಕ