ತುಮಕೂರು: ಕೊಬ್ಬರಿ ಬೆಲೆ ಪಾತಾಳಕ್ಕಿಳಿದಿರುವ ಹಿನ್ನೆಲೆಯಲ್ಲಿ ತೆಂಗು ಬೆಳೆಗಾರರ ಪರವಾಗಿ ಮಾಜಿ ಸಂಸದ ಎಸ್. ಪಿ.ಮುದ್ದಹನುಮೇಗೌಡ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಸಾವಿರಾರು ಜನ ಭಾಗಿಯಾದರು.
ನಗರದ ಬಿಜಿಎಸ್ ವೃತ್ತದಲ್ಲಿ ಬೆಳಗ್ಗೆ 10.30ರಿಂದ ಸಂಜೆ 5ರವರೆಗೆ ನಡೆದ ಧರಣಿಯಲ್ಲಿ ವಿವಿಧ ಮಠಾಧೀಶರು, ರಾಜಕೀಯ ಪಕ್ಷ, ರೈತ, ಕಾರ್ಮಿಕ ಮುಖಂಡರು ಒಂದೇ ವೇದಿಕೆಯಲ್ಲಿ ಕುಳಿತು ಹೋರಾಟ ಬೆಂಬಲಿಸಿದರು.
ಕ್ವಿಂಟಾಲ್ ಕೊಬ್ಬರಿ ಬೆಲೆ 10 ಸಾವಿರ ರೂಪಾಯಿಗೆ ಕುಸಿದಿದ್ದು, ಬೆಂಬಲ ಬೆಲೆ 9920 ರೂ. ಇದೆ. ಕೂಡಲೇ ಕನಿಷ್ಠ ಬೆಂಬಲ ಬೆಲೆಯನ್ನು 20 ಸಾವಿರ ರೂಪಾಯಿಗೆ ಏರಿಕೆ ಮಾಡಿ ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಬದುಕು ಉಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಕಳುಹಿಸಲಾಯಿತು. ಪ್ರತಿಭಟನಾನಿರತ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಮಾತನಾಡಿ, ಜಿಲ್ಲಾಡಳಿತ ತೆಂಗು ಬೆಳೆಗಾರರ ಹಿತ ಕಾಯಲು ಬದ್ಧವಾಗಿದ್ದು, ಮನವಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕ್ವಿಂಟಾಲ್ ಕೊಬ್ಬರಿ ಬೆಳೆಯಲು 11300ರೂ. ವೆಚ್ಚವಾಗಲಿದೆ ಎಂದು ಸರ್ಕಾರದ ಕೃಷಿ ಬೆಲೆ ಆಯೋಗವೇ ನಿರ್ಧರಿಸಿದೆ. ಹೀಗಿರುವಾಗ 10ಸಾವಿರ ರೂಪಾಯಿಗೆ ಕೊಬ್ಬರಿ ಮಾರಿದರೆ ರೈತ ಕುಟುಂಬ ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.
ಸತತ ಬರ, ಅಂತರ್ಜಲ ಕುಸಿತ ಹಾಗೂ ವಿವಿಧ ಕೀಟಬಾಧೆಯಿಂದ ತೆಂಗು ಬೆಳೆಗಾರರು ನಷ್ಟದಲ್ಲಿಯೇ ಕೃಷಿ ಮುಂದುವರಿಸಿದ್ದಾರೆ, ಇಂತಹ ಸಂದರ್ಭದಲ್ಲಿ ಕೊಬ್ಬರಿ ಬೆಲೆ ಕುಸಿದಿರುವುದು ದೇಶದಲ್ಲಿಯೇ ಅತೀ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದ್ದು, ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಉತ್ತಮ ಬೆಲೆಗೆ ಮಾರಾಟವಾಗುವ ವಿಶ್ವಾಸ: ಜಿಲ್ಲೆಯಲ್ಲಿ ಬೆಳೆಯುವ ಅಡಕೆ, ಹುಣಸೆಹಣ್ಣು ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುವ ವಿಶ್ವಾಸ ಮೂಡಿಸಿದೆ. ಆದರೆ, ಅತಿ ಹೆಚ್ಚಾಗಿ ಬೆಳೆಯುವ ಕೊಬ್ಬರಿಯ ಬೆಲೆ ನಿರಂತರವಾಗಿ ಕುಸಿಯುತ್ತಿದೆ. ರೈತನನ್ನು ಬದುಕಿಸಲು ಸರ್ಕಾರಗಳು ಮಧ್ಯಪ್ರವೇಶಿಸಬೇಕು ಎಂದರು. ಸಾಂಕೇತಿಕವಾಗಿ ಒಂದು ದಿನದ ಧರಣಿ ನಡೆಸುವ ಮೂಲಕ ಸರ್ಕಾರಗಳ ಗಮನ ಸೆಳೆಯಲಾಗಿದೆ, ಕೂಡಲೇ ಸರ್ಕಾರಗಳು ಕೊಬ್ಬರಿ ಬೆಳೆಗಾರರ ಉಳಿವಿಗೆ ಕ್ರಮಕೈಗೊಳ್ಳದಿದ್ದರೆ ಹೋರಾಟದ ಸ್ವರೂಪ ಬದಲಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮಾಜಿ ಶಾಸಕ ಡಾ.ರಫೀಕ್‌ಅಹ್ಮದ್, ಮುಖಂಡರಾದ ರಾಯಸಂದ್ರ ರವಿಕುಮಾರ್, ತಿಪಟೂರು ಸಿ.ಬಿ.ಶಶಿಧರ್, ಕಲ್ಲಹಳ್ಳಿ ದೇವರಾಜು, ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಆರ್.ಕಾಮರಾಜು, ಗೂಳೂರು ವಿಜಯಕುಮಾರ್ ಮತ್ತಿತರರು ಭಾಗಿಯಾದರು.ಎಡಪಕ್ಷಗಳ ಮುಖಂಡರಾದ ಸೈಯದ್‌ಮುಜೀಬ್, ಉಮೇಶ್, ರೈತ ಮುಖಂಡರಾದ ಬಯ್ಯರೆಡ್ಡಿ, ಕೆಳಹಟ್ಟಿ ಶ್ರೀಕಾಂತ್, ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ, ಅರೇಶಂಕರ ಮಠದ ಸಿದ್ದರಾಮಚೈತನ್ಯ ಸ್ವಾಮೀಜಿ ಸೇರಿ ಸಾಕಷ್ಟು ಜನ ರೈತರೇ ಸ್ವಯಂ ಪ್ರೇರಿತವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವೆನ್ನಿಸಿತು.
ಜಿಲ್ಲೆಯಲ್ಲಿ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ, ವರ್ಷಪೂರ್ತಿ ಕಾಪಾಡಿದ ಕೊಬ್ಬರಿಗೆ ಬೆಲೆ ಕೈಕೊಟ್ಟರೆ ಸಾವಿರಾರು ರೈತ ಕುಟುಂಬಗಳು ಬೀದಿಗೆ ಬರಲಿವೆ. ಜೀವನ ನಿರ್ವಹಣೆ, ಕೃಷಿಗೆ ಸಾಕಷ್ಟು ಖರ್ಚು ಮಾಡಿಕೊಂಡು ಸಾಲದಲ್ಲಿರುವ ರೈತರಿಗೆ ತಾನು ಬೆಳೆದ ಬೆಳೆಗೆ ಬೆಲೆ ಬಂದರಷ್ಟೇ ಬದುಕು. ಕೂಡಲೇ ಪ್ರಧಾನಿ ನರೇಂದ್ರಮೋದಿ ಅವರು ಕೊಬ್ಬರಿಗೆ ಕನಿಷ್ಠ 20 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು. ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ