ಜಿಲ್ಲೆ

ರಕ್ಷಣಾ ಕ್ಷೇತ್ರದಲ್ಲಿ ಅಸುರಕ್ಷಿತ ಸ್ಥಿತಿ ಆತಂಕ, ರಾಜ್ಯ ಕಾಂಗ್ರೆಸ್ ಸರ್ಕಾರದ ಅಸಮರ್ಥತೆ ಕಾರಣ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ರಕ್ಷಣಾ ಕ್ಷೇತ್ರದ ವಿಚಾರದಲ್ಲಿ ಕರ್ನಾಟಕದ ಅಸುರಕ್ಷಿತ ಸ್ಥಿತಿಗೆ ರಾಜ್ಯ ಸರ್ಕಾರದ ಅಸಮರ್ಥತೆ ಕಾರಣ ಎಂದು ಕಿಡಿಕಾರಿರುವ ಸಂಸದ ಡಾ.ಕೆ.ಸುಧಾಕರ್, ದಶಕದ ಹಿಂದೆ ವಿಭಜನೆಯಾಗಿ ಪುನರ್ ನಿಮಾರ್ಣವಾಗುತ್ತಿರುವ ನೆರೆಯ ಆಂಧ್ರ ರಾಜ್ಯಕ್ಕೆ ಹೋಲಿಸಿಕೊಂಡು ಅಸುರಕ್ಷಿತವಾಗುವಷ್ಟು ಕರ್ನಾಟಕದ ರಕ್ಷಣಾ ಮತ್ತು ಏರೋಸ್ಪೇಸ್ ಕೈಗಾರಿಕಾ ವ್ಯವಸ್ಥೆ ದುರ್ಬಲವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ತಿಳಿಸಿರುವ ಅವರು, ಭಾರತದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ನಾವೀನ್ಯತೆ ಮತ್ತು ಉತ್ಪಾದನೆಯೊಂದಿಗೆ ಕರ್ನಾಟಕ ಮುಂಚೂಣಿಯಲ್ಲಿದೆ. ರಕ್ಷಣಾ ಕ್ಷೇತ್ರಕ್ಕಾಗಿ ತಯಾರಿಸಲಾದ ವಿಮಾನ ಮತ್ತು ಹೆಲಿಕಾಪ್ಟರ್ಗಳಲ್ಲಿ ಸುಮಾರು ಶೇ.70ರಷ್ಟು ಇಲ್ಲಿಂದಲೇ ಉತ್ಪಾದನೆಯಾಗುತ್ತಿವೆೆ. ಇದೇ ಕ್ಷೇತ್ರದ ರಫ್ತಿನಲ್ಲಿ ಕರ್ನಾಟಕ ಶೇ.65ಕ್ಕಿಂತಲೂ ಅಧಿಕ ಪಾಲು ಹೊಂದಿದೆ ಎಂದಿದ್ದಾರೆ. 2022ರಲ್ಲಿ ಬಿಜೆಪಿ ಸರ್ಕಾರವು ಕರ್ನಾಟಕ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ 2022&-2027 ಜಾರಿಗೊಳಿಸಿ, ಜಾಗತಿಕ ಮಟ್ಟದಲ್ಲಿ ಕರ್ನಾಟಕ ಸ್ಪರ್ಧಿಸಲು ಹಾಗೂ ಹೂಡಿಕೆ ಆಕರ್ಷಿಸಲು ಶ್ರಮಿಸಿತ್ತು. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರದಲ್ಲಿ ಬಳಸಿದ ಹೈಟೆಕ್ ಆತ್ಮಹತ್ಯಾ ಡ್ರೋನ್ಗಳು ಕರ್ನಾಟಕದಲ್ಲೇ ತಯಾರಾಗಿದ್ದು ಎನ್ನುವುದು ರಾಜ್ಯದಲ್ಲಿ ರಕ್ಷಣಾ ವಲಯದ ಕೈಗಾರಿಕೆ ಬಲವಾಗಿ ಬೆಳೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ನೆರೆಯ ರಾಜ್ಯದ ಮುಖ್ಯಮಂತ್ರಿಯೊಬ್ಬರು ಹೂಡಿಕೆಗಾಗಿ ಮಾಡಿದ ಪ್ರಯತ್ನಗಳು ಅಸುರಕ್ಷಿತ ಎನಿಸುವುದು ಈಗಿನ ರಾಜ್ಯ ಸರ್ಕಾರದ ವೈಲ್ಯಕ್ಕೆ ಸಾಕ್ಷಿ. ಹೂಡಿಕೆಯಲ್ಲಿ ಕಾರ್ಯಕ್ಷಮತೆ ಕೊರತೆ ಹಾಗೂ ಆಡಳಿತ ನಡೆಸುವವರ ಆದ್ಯತೆಗಳಲ್ಲಿನ ದೋಷಗಳನ್ನು ಎತ್ತಿ ತೋರಿಸುತ್ತದೆ ಎಂದು ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿರುವುದು ಪಾರ್ಶ್ವವಾಯು ಪೀಡಿತ ಸರ್ಕಾರ
ರಾಜ್ಯದ ಆರ್ಥಿಕ ವ್ಯವಸ್ಥೆಯು ಹೂಡಿಕೆಗಳನ್ನು ಆಕರ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆಯಾದರೂ, ಕಾಂಗ್ರೆಸ್ ಪಕ್ಷದ ಕೆಲವರು ನಂಬಿರುವಂತೆ ಬೆಳವಣಿಗೆ ಸ್ವಯಂಚಾಲಿತವಾಗಿ ಆಗುವುದಿಲ್ಲ. ಪರಿಶ್ರಮ, ಮನವೊಲಿಕೆ ಮತ್ತು ತಾಳ್ಮೆಯಿಂದ ಹೂಡಿಕೆಗಳನ್ನು ತರಬೇಕಾಗುತ್ತದೆ. ಇದಕ್ಕೆ ಆದ್ಯತೆಗಳ ಬಗ್ಗೆ ಸ್ಪಷ್ಟತೆ ಇರುವ ಸರ್ಕಾರ ಬೇಕು. ಆದರೆ, ದುರದೃಷ್ಟವಶಾತ್ ಕರ್ನಾಟಕದಲ್ಲಿ ಕುಂಟುತ್ತಿರುವ ಪಾರ್ಶ್ವವಾಯು ಪೀಡಿತ ಸರ್ಕಾರವಿದೆ ಎಂದು ಸಂಸದ ಡಾ.ಕೆ. ಸುಧಾಕರ್ ಟೀಕಿಸಿದ್ದಾರೆ.

*ಪೈಪೋಟಿ ಇದೇ ಮೊದಲಲ್ಲ
ರಾಜ್ಯ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಘರ್ಷ ಮಾಡುವ ಬದಲು, ಸಹಯೋಗ, ಸಹಕಾರ ಮತ್ತು ವಿಶ್ವಾಸದಿಂದ ಇರಲಿ, ಕರ್ನಾಟಕ ಮತ್ತು ಹಿಂದಿನ ಅವಿಭಜಿತ ಆಂಧ್ರಪ್ರದೇಶ ನಡುವಿನ ಆರೋಗ್ಯಕರ ಪೈಪೋಟಿ ಇದೇ ಮೊದಲಲ್ಲ. ಐಟಿ-ಬಿಟಿ ಕ್ಷೇತ್ರ ದಿಢೀರನೇ ಬೆಳೆಯುತ್ತಿದ್ದಾಗಲೂ ಹೆಚ್ಚಿನ ಸ್ಪರ್ಧೆ ಇತ್ತು. ಆದರೆ, ಈಗ ಇರುವ ವ್ಯತ್ಯಾಸವೆಂದರೆ ಆಂಧ್ರಪ್ರದೇಶದಲ್ಲಿ ಹೂಡಿಕೆ ತರಲು ಸಮರ್ಥರಾದ ವ್ಯಕ್ತಿ ಇದ್ದಾರೆ. ಆದರೆ, ಕರ್ನಾಟಕದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಇಲ್ಲವೇ ಪ್ರಬಲ ನಾಯಕನ ಸ್ಥಾನವನ್ನು ತುಂಬಬಲ್ಲ ವ್ಯಕ್ತಿ ಇಲ್ಲ ಎಂದು ಡಾ.ಕೆ. ಸುಧಾಕರ್ ವಿಷಾದಿಸಿದ್ದಾರೆ.