ವಿಜಯವಾಣಿ ಸುದ್ದಿಜಾಲ ಕಾರವಾರ
ಇಲ್ಲಿನ ಬೈತಖೋಲ್ ಬಂದರಿನಲ್ಲಿ ರಾಜ್ಯ ಉಗ್ರಾಣ ನಿಮಗದ ಬೃಹತ್ ಉಗ್ರಾಣದಲ್ಲಿ ಹುಳು ಬಿದ್ದ ಅಕ್ಕಿ ಸಂಗ್ರಹಿಸಿದ್ದು, ಸುತ್ತಲಿನ ಜನರ ಗೋಳು ಹೇಳದಾಗಿದೆ.
ರಾಜ್ಯ ಆಹಾರ ನಿಗಮ ಇಲ್ಲಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿದೆ. ಅದಕ್ಕೆ ಹುಳುಗಳು ಬಿದ್ದಿವೆ. ಉಗ್ರಾಣ ಸೋರುತ್ತಿದೆ. ಅಲ್ಲೆ, ಇಲಿಗಳು ಸತ್ತು ಬಿದ್ದಿವೆ. ಇದರಿಂದ ವಿಪರೀತ ವಾಸನೆ ಬರುತ್ತಿತ್ತು. ಸುತ್ತಲಿನ ವಾತಾವರಣ ತುಂಬ ಹದಗೆಟ್ಟು ಹೋಗಿದೆ. ಜನರು ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಅಲ್ಲದೆ, ರಾತ್ರಿಯಾಗುತ್ತಿದ್ದಂತೆ ಅಕ್ಕಿಗೆ ಬಿದ್ದ ಹುಳುಗಳು ಬೆಳಕು ಹುಡುಕಿಕೊಂಡು ಅಕ್ಕಪಕ್ಕದ ಮನೆಗಳ ವಿದ್ಯುತ್ ಬಲ್ಬ್ಗಳ ಬಳಿ ಹಾರುತ್ತ ಬರುತ್ತವೆ. ಅನ್ನದ ಬಟ್ಟಲಲ್ಲಿ ಬೀಳುತ್ತವೆ. ಮಲಗುವ ಹಾಸಿಗೆಯಲ್ಲಿ ತುಂಬಿಕೊಂಡು ಕಚ್ಚಿ ತೊಂದರೆಕೊಡುತ್ತವೆ. ಕಿವಿ ಕಣ್ಣಿಗೆಲ್ಲ ಹೊಕ್ಕಿ ಹಿಂಸಿಸುತ್ತವೆ.
ಮೇ ಮೂರನೇ ವಾರದಲ್ಲಿ ‘ವಿಜಯವಾಣಿ’ ಈ ಸಂಬಂಧ ವರದಿ ಮಾಡಿತ್ತು. ಆಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದ ಇಲಾಖೆ ಯಾವುದೇ ಕ್ರಮ ವಹಿಸಿಲ್ಲ.
ಅಕ್ಕಿಗಳು ಇದ್ದಲ್ಲಿ ಹುಳುಗಳು ಆಗುತ್ತವೆ. ಮಾತ್ರೆ ಇಟ್ಟು ಜನರಿಗೆ ತೊಂದರೆಯಾಗದಂತೆ ಸಮರ್ಪಕವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗುವುದು. |ಪುಟ್ಟಸ್ವಾಮಿ, ಆಹಾರ ಇಲಾಖೆ ಉಪನಿರ್ದೆಶಕ