ತ್ಯಾಮಗೊಂಡ್ಲು: ಜಮೀನಿಗೆ ದಾರಿ ಮಾಡಿಕೊಳ್ಳಲು ಶಿಲಾಶಾಸನವಿದ್ದ ಬಂಡೆಯನ್ನೇ ದುಷ್ಕರ್ಮಿಗಳು ಒಡೆದು ಹಾಕಿರುವುದು ಹೋಬಳಿಯ ಮಣ್ಣೆ ಗ್ರಾಮದಲ್ಲಿ ಶನಿವಾರ ಬೆಳಕಿಗೆ ಬಂದಿದ್ದು, ಪ್ರಕರಣ ಠಾಣೆ ಮೆಟ್ಟಿಲೇರಿದೆ.
8ನೇ ಶತಮಾನದಲ್ಲಿ ಗಂಗರಾಜರ ರಾಜಧಾನಿಯಲ್ಲೊಂದಾಗಿದ್ದ ಮಣ್ಣೆ ಗ್ರಾಮದಲ್ಲಿ ಗಂಗರಾಜರ ಸಾಕಷ್ಟು ಶಿಲಾಶಾಸನಗಳಿದ್ದು, ಇದರಲ್ಲಿ ಮಣ್ಣೆ ಗ್ರಾಮ ಮುಖ್ಯರಸ್ತೆಯ ಕೆರೆ ಸಮೀಪದ ಕಪಿಲೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದ ವಿಜಯನಗರ ಸಾಮ್ರಾಜ್ಯ ಕಾಲದ ಶಿಲಾ ಶಾಸನವಿದ್ದ ಬಂಡೆ ಕಿಡಿಗೇಡಿಗಳ ಕೃತ್ಯಕ್ಕೆ ಪುಡಿಪುಡಿಯಾಗಿದೆ. ಜಮೀನಿಗೆ ರಸ್ತೆ ನಿರ್ಮಿಸಿಕೊಳ್ಳಲು ನಾಡಿನ ಇತಿಹಾಸ ಪರಿಚಯಿಸುವ ಶಿಲಾಶಾಸನವನ್ನೇ ಒಡೆದು ಹಾಕಿರುವುದು ಅಕ್ಷಮ್ಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಡಿಒ ಭೇಟಿ: ಬಂಡೆ ಒಡೆದಿರುವ ವಿಷಯ ತಿಳಿದ ಮಣ್ಣೆ ಗ್ರಾಪಂ ಪಿಡಿಒ ಸಿದ್ದರಾಜಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳಿಗೆ ಮಾಹಿತಿ ನೀಡಿರುವ ಹಿರಿಯ ಇತಿಹಾಸ ಸಂಶೋಧಕ ಡಾ.ಎಚ್.ಎಸ್.ಗೋಪಾಲರಾವ್ ಮಣ್ಣೆಯಲ್ಲಿನ ಹಲವು ಶಿಲಾಶಾಸನಗಳು, ಇತಿಹಾಸದ ಪಳೆಯುಳಿಕೆಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.
ರಕ್ಷಣೆ ಕಾಳಜಿಯಿಲ್ಲ: ತ್ಯಾಮಗೊಂಡ್ಲುವಿಗೆ ಸಮೀಪವಿರುವ ಮಣ್ಣೆ ಗ್ರಾಮ 8ನೇ ಶತಮಾನದಲ್ಲಿ ಗಂಗರು ನಿರ್ಮಿಸಿದ ಗ್ರಾಮ ಎಂಬುದಾಗಿ ಇತಿಹಾಸದಲ್ಲಿ ಉಲ್ಲೇಖವಿದೆ. ಆ ನಂತರ ಚೋಳರು ವಶಪಡಿಸಿಕೊಂಡು ಅನೇಕ ದೇವಾಲಯ ನಿರ್ಮಿಸಿದ್ದರು ಎನ್ನಲಾಗಿದ್ದು, ಜನಪ್ರತಿನಿಧಿಗಳು, ಪುರಾತತ್ವ ಇಲಾಖೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದೊಂದೇ ಕುರುಹುಗಳು ಕಣ್ಮರೆಯಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.