ಜಿಲ್ಲೆ

ಬನ್ನಾಡಿಯಲ್ಲಿ ಆಳುಪ ದೊರೆ ಒಂದನೇ ಕುಲಶೇಖರನ ಕಾಲದ ಶಾಸನ ಪತ್ತೆ

Udupi

ಕೋಟ: ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಾಡಿ ಗ್ರಾಮದ ಸಂಜೀವ ಶೆಟ್ಟಿ ಎಂಬುವರ ಕೃಷಿ ಭೂಮಿಯಲ್ಲಿ ಶಾಸನವೊಂದು ಪತ್ತೆಯಾಗಿದ್ದು, ಇದು ಆಳುಪ ದೊರೆ ಒಂದನೇ ಕುಲಶೇಖರನ ಕಾಲಕ್ಕೆ ಸೇರಿದ್ದು ಎಂದು ಹೇಳಲಾಗಿದೆ.

ಶಾಸನವನ್ನು ಬಿ.ಕುಶ ಆಚಾರ್ಯ ಪತ್ತೆ ಮಾಡಿದ್ದು, ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 12ನೇ ಶತಮಾನದ ಕನ್ನಡ ಲಿಪಿ ಭಾಷೆಯಲ್ಲಿದೆ. 5 ಅಡಿ ಎತ್ತರ 2 ಅಡಿ ಅಗಲ ಹೊಂದಿರುವ ಶಾಸನ 18 ಸಾಲುಗಳನ್ನು ಒಳಗೊಂಡಿದೆ. ಮೇಲ್ಭಾಗದಲ್ಲಿ ಶಿವಲಿಂಗ, ಇಕ್ಕೆಲಗಳಲ್ಲಿ ಕೈ ಮುಗಿದು ನಿಂತಿರುವ ವ್ಯಕ್ತಿ ಹಾಗೂ ಎರಡು ಆಕಳುಗಳ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ.

ಶಾಸನದ ಹೆಚ್ಚಿನ ಸಾಲುಗಳು ಭಗ್ನಗೊಂಡಿದ್ದು, ಓದಲು ಸಾಧ್ಯವಾದ ಕೆಲವು ಸಾಲುಗಳಿಂದ ಶಾಸನವು ಆಳುಪ ದೊರೆ ಒಂದನೇ ಕುಲಶೇಖರನ ಕಾಲಕ್ಕೆ ಸೇರಿದ್ದು ಎಂದು ಹೇಳಬಹುದು. ಶಾಸನದಲ್ಲಿ ‘ಶಕವರುಷ 1112ನೆಯ ಸಾಧಾರಣ ಸಂವತ್ಸರದ ಜೇಷ್ಠ ಮಾಸ 11 ಗುರುವಾರ’ ಎಂಬ ಕಾಲಮಾನದ ಉಲ್ಲೇಖವಿದ್ದು ಇದು ಕ್ರಿ.ಶ. 1190ಕ್ಕೆ ತಾಳೆಯಾಗುತ್ತದೆ. ಕುಲಶೇಖರನು ಮಂಗಳಾಪುರದ (ಮಂಗಳೂರು) ಅರಮನೆಯಲ್ಲಿದ್ದು ಈ ಸಂದರ್ಭದಲ್ಲಿ ಬನಹಾಡಿಯ ಬಸಪ್ಪನು ದೇವರ ನಿತ್ಯ ನೈವೇದ್ಯಕ್ಕೆ ನೀಡಿದ ಭೂ ದಾನದ ವಿವರವನ್ನು ಶಾಸನವು ತಿಳಿಸುತ್ತದೆ.

ಶಾಸನದಲ್ಲಿ ಉಲ್ಲೇಖಗೊಂಡ ಬನಹಾಡಿ ಎಂಬುದು ಪ್ರಸ್ತುತ ಬನ್ನಾಡಿಯ ಪ್ರಾಚೀನ ಹೆಸರಾಗಿರಬಹುದು ಎಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಪ್ರವೀಣ್ ಡಿ ಆಚಾರ್ಯ ಸಾಲಿಗ್ರಾಮ, ಕಿಶನ್‌ಕುಮಾರ್ ಮೂಡುಬೆಳ್ಳೆ ಹಾಗೂ ಸ್ಥಳೀಯರು ಸಹಕಾರ ನೀಡಿದ್ದಾರೆ.