ಅರಕೇರಾ: ತಾಲೂಕಿನ ಮುಷ್ಟೂರಿನಲ್ಲಿ ಹಳೆಯ ಕಾಲದ ವೀರಗಲ್ಲು ಹಾಗೂ ಶಾಸನ ಪತ್ತೆಯಾಗಿದೆ.
ಇದನ್ನೂ ಓದಿ:ಸುರಕ್ಷಿತ ಸ್ಥಳಕ್ಕೆ ಸೇರಿದ ವೀರಗಲ್ಲುಗಳು
ಗ್ರಾಮದ ಶರಣಪ್ಪ ಗೌಡರ ಹೊಲದಲ್ಲಿ ಬಸವಣ್ಣ, ಮಾರುತಿ, ಪೋಲಮ್ಮ, ಯಲ್ಲಮ್ಮ, ಮಾರೆಮ್ಮ ದೇವಿ ಚಿತ್ರವಿರುವ ವೀರಗಲ್ಲು ಪತ್ತೆಯಾಗಿದೆ. ಈ ಹಿಂದೆ ಇಲ್ಲಿ ವೈಷ್ಣವ ಪಂಗಡದ ಮೋಷ್ಟಮರು (ಮೋಷ್ಟಿಕರು) ನೆಲೆಸಿದ್ದರು. ಇವರಿಂದ ಮೋಷ್ಟಮರು ಅಥವಾ ಮುಷ್ಟೂರು ಎಂದು ಹೆಸರು ಬಂದಿದೆ. ಮುಷ್ಟ ಎಂದರೆ ಖನಿಜದ ಗಟ್ಟಿ ದೊರೆಯುವ ಪ್ರದೇಶ ಎಂದು ವರ್ಣಿಸಿದ್ದಾರೆ.
ಹೊರವಲಯದಲ್ಲಿ ಬಸವಣ್ಣ ಕಟ್ಟೆಯಲ್ಲಿ ಎರಡು ಶಾಸನ ಹಾಗೂ ವೀರಗಲ್ಲು ಏಕಶಿಲೆಯಲ್ಲಿ ಪತ್ತೆಯಾಗಿವೆ. ವೀರರು ಹೋರಾಡುತ್ತಿರುವುದು, ಮಡಿದ ವೀರನನ್ನು ಅಪ್ಸರೆಯರು ಸ್ವರ್ಗ ಲೋಕಕ್ಕೆ ಕರೆದೊಯ್ಯುತ್ತಿರುವುದು ಹಾಗೂ ಪೀಠದ ಮೇಲೆ ಕುಳಿತ ರಾಜನಿಗೆ ಇಬ್ಬರು ಚಾಮರ ಬೀಸುತ್ತಿರುವ ಕೆತ್ತನಗಳಿವೆ. ವೀರಗಲ್ಲಿನ ಮೇಲ್ಭಾಗದ ಶಾಸನ ಕನ್ನಡ ಲಿಪಿಯಲ್ಲಿದೆ. ರಾಷ್ಟ್ರಕೂಟ ಅರಸರ ಬಿರುದುಗಳಾದ ಶ್ರೀ ಪಂಚಮಹಾಶಬ್ದ ಮಹಾಸಾಮಂತ ಶ್ರೀ ಪೃಥ್ವಿವಲ್ಲಭ ಪರಮೇಶ್ವರ ಪರಮಭಟ್ಟಾರಕ ಎಂದು ಉಲ್ಲೇಖವಿದ್ದು, ಕ್ರಿಶ 8-9ನೇ ಶತಮಾನಕ್ಕೆ ಸೇರಿದ್ದು ಎಂದು ಗುರುತಿಸಲಾಗಿದೆ. ಇನ್ನೊಂದು ಶಾಸನ ನಂದಿ ವಿಗ್ರಹದ ಪಾದದಲ್ಲಿ ಕಂಡುಬರುತ್ತದೆ. ಈ ಲಿಪಿಗಳನ್ನು ಗಮನಿಸಿದರೆ ಕ್ರಿಶ 19-20ನೇ ಶತಮಾನಕ್ಕೆ ಸೇರೆದ ಶಾಸನವಾಗಿದೆ ಎಂದು ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ. ಕ್ಷೇತ್ರ ಕಾರ್ಯದಲ್ಲಿ ರಾಮದುರ್ಗದ ಕೆ.ಬಿ.ಗಂಗಾಧರ, ಅನಿಲ್‌ಕುಮಾರ, ಸ್ಥಳೀಯರಾದ ಮಹಾದೇವಯ್ಯ ಸ್ವಾಮಿ, ರಮೇಶ ಪಾಟೀಲ ಇದ್ದರು.