ಕನಕಗಿರಿ ತಾಲೂಕಿನ ಬಂಕಾಪುರದಲ್ಲಿ ದೊರೆತ ಶಾಸನದೊಂದಿಗೆ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್, ಪ್ರಮುಖರಾದ ಬಂಕಾಪುರದ ಸೋಮನಾಥ, ಗಂಗಾವತಿಯ ಪ್ರೊ.ಬಸವರಾಜ ಅಯೋಧ್ಯ ,ಡಾ. ಸುರೇಶ್ ಗೌಡ ಇತರರಿದ್ದರು. 
ಜಿಲ್ಲೆ

ಉಡಚನಾಯಕನಿಗೆ ಸೇರಿದ ಶಾಸನ ಪತ್ತೆ

ಕನಕಗಿರಿ: ತಾಲೂಕಿನ ಬಂಕಾಪುರದಲ್ಲಿ ಕನಕಗಿರಿಯನ್ನು ಆಳಿದ ಅರಸರಿಗೆ ಸೇರಿದ ಎರಡು ಶಾಸನಗಳು ಪತ್ತೆಯಾಗಿವೆ ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.

ಬಂಕಾಪುರ ಗ್ರಾಮದ ಉತ್ತರಕ್ಕೆ ಮೊದಲ ಶಾಸನದಲ್ಲಿ 24 ಸಾಲುಗಳಲ್ಲಿ, ಆಗ್ನೇಯಕ್ಕೆ ಎರಡು ಕಿಮೀ ಅಂತರದಲ್ಲಿ ಹುಟ್ಟು ಬಂಡೆಯ ಮೇಲೆ ಬರೆದ ಮತ್ತೊಂದು ಶಾಸನ ಆರು ಸಾಲುಗಳಲ್ಲಿ ರಚನೆಯಾಗಿದೆ. ಇವು 17ನೇ ಶತಮಾನದ ಕನ್ನಡ ಲಿಪಿಯಲ್ಲಿವೆ. ಮೊದಲ ಶಾಸನ ಐದನೇ ದೊರೆ ಇಮ್ಮಡಿ ಉಡಚನಾಯಕನ ಪಟ್ಟದ ರಾಣಿ ಚಿಕ್ಕ ಲಕ್ಷ್ಮಮ್ಮನ ಮಗ ಲಕ್ಷ್ಮಪ್ಪ ನಾಯಕ ಬಂಕಾಪುರದ ಬಳಿ ದೇವಸ್ಥಾನ, ಬಾವಿ ಹಾಗೂ ವನಗಳನ್ನು ನಿರ್ಮಿಸಿ ದೇವರ ಪೂಜೆಗಾಗಿ ಗದ್ದೆಯನ್ನು ದಾನ ನೀಡಿದ ಕುರಿತು ತಿಳಿಸುತ್ತದೆ. ಶಾಸನದಲ್ಲಿ ಇಮ್ಮಡಿ ಉಡಚನಾಯಕನ ತಂದೆ ಕನಕಯ್ಯ ನಾಯಕ, ತಾತ ಕೆಲವಡಿ ಉಡಚ ನಾಯಕ ಎಂದು ಉಲ್ಲೇಖಿಸಲಾಗಿದೆ. ಇಬ್ಬರು ಅರಸರ ಬಗ್ಗೆ ಉಲ್ಲೇಖವಿರುವ ಮೊದಲ ಶಾಸನವಾಗಿದೆ. ಎರಡನೇ ಶಾಸನ ಇಮ್ಮಡಿ ಉಡಚನಾಯಕ ಬಂಕಾಪುರದ ಗೌಡ, ಶಾನುಭೋಗರಿಗೆ ಮನೆ, ಗದ್ದೆ ನೀಡಿದ ಕುರಿತು ತಿಳಿಸುತ್ತದೆ ಎಂದರು.