ಜಿಲ್ಲೆ

ನಾಗಮಂಗಲ ತಾಲೂಕಿನ ಮಾಚಲಘಟ್ಟದಲ್ಲಿ ಶಾಸನೋಕ್ತ ಕಲ್ಲು ಪತ್ತೆ: ಕುತೂಹಲ ಮೂಡಿಸುವ ಸ್ವರೂಪ

ಕೆ.ಎನ್.ರಾಘವೇಂದ್ರ

ನಾಗಮಂಗಲ: ತಾಲೂಕಿನ ಮಾಚಲಘಟ್ಟ ಗ್ರಾಮದಲ್ಲಿ ಅಪರೂಪದ ಶಾಸನೋಕ್ತ ಮಂತ್ರ, ತಂತ್ರದ ಕಲ್ಲು ಪತ್ತೆಯಾಗಿದೆ. ಇದರ ಸ್ವರೂಪ ಕುತೂಹಲ ಮೂಡಿಸುತ್ತಿದೆ. ಮಾತ್ರವಲ್ಲದೆ ಹಿಂದಿನ ಕಾಲದಲ್ಲಿ ತಮ್ಮ ಗ್ರಾಮಗಳಿಗೆ ಯಾವುದೇ ದುಷ್ಟಶಕ್ತಿಯೂ ಬಾಧಿಸದಿರಲಿ ಎಂಬ ಉದ್ದೇಶದಿಂದ ಪ್ರವೇಶದ್ವಾರಗಳಲ್ಲಿ ಈ ಬಗೆಯ ಮಂತ್ರದ ಕಲ್ಲನ್ನು ನೆಟ್ಟು ಪೂಜಿಸುತ್ತಿದ್ದರೆಂದು ತಿಳಿದುಬಂದಿದೆ.
ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಡಾ.ಶೈಲೇಂದ್ರಮೋಹನ್ ಅವರ ಅನುಮತಿ ಮೇರೆಗೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಪುರಾತತ್ವ ಸಂಶೋಧಕ ಡಾ.ಸಿ.ಎ.ಶಶಿಧರ ಮಾಚಲಘಟ್ಟ ಗ್ರಾಮದಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಲ್ಲನ್ನು ಪತ್ತೆ ಮಾಡಿದ್ದಾರೆ.
ಗ್ರಾಮದ ಪೂರ್ವದಿಕ್ಕಿನಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಮಲ್ಲೇಶ್ವರ ದೇವಾಲಯದ ಹಿಂಭಾಗದಲ್ಲಿ ಅಪರೂಪದ ಮಂತ್ರದ ಕಲ್ಲು ಪತ್ತೆಯಾಗಿದೆ. ಬಹುತೇಕ ಭೂಮಿಯಲ್ಲಿ ಹುದುಗಿದ್ದ ಮಂತ್ರದ ಕಲ್ಲನ್ನು ಕೇಂದ್ರದ ಸಹ ಸಂಶೋಧಕ ಡಾ. ಮರಿಸ್ವಾಮಿ ಹಾಗೂ ಸ್ಥಳೀಯರ ನೆರವಿನಿಂದ ಭೂಮಿಯಿಂದ ಹೊರತೆಗೆದು ಶಾಸನದ ಪಡಿಯಚ್ಚು ತೆಗೆದಿದ್ದಾರೆ. ಮಂತ್ರಾಕ್ಷರ ಕಲ್ಲಿನ ಮೇಲ್ಭಾಗದಲ್ಲಿ ದೇವತಾ ಮೂರ್ತಿ ಹಾಗೂ ಕೆಳಭಾಗದಲ್ಲಿ ವಾಸ್ತುಮಂಡಲಗಳ ರೇಖಾಚಿತ್ರಗಳಿವೆ. ಕೆಳಭಾಗದಲ್ಲಿರುವ ಚೌಕಾಕಾರದ 5/4 ಮನೆಗಳಲ್ಲಿ(ಒಟ್ಟು 20 ಮನೆಗಳು) ಓಂ, ಹ್ರೀಂ ಎನ್ನುವ ಮಂತ್ರ ಬೀಜಾಕ್ಷರಗಳಿವೆ.

ಈ ಮಂತ್ರ ಬೀಜಾಕ್ಷರಗಳು ಕ್ರಿ.ಶ 16 ಮತ್ತು 17ನೇ ಶತಮಾನದ ಕನ್ನಡ ಮೋಡಿ ಲಿಪಿಯಲ್ಲಿ ಬರೆಯಲ್ಪಟ್ಟಿವೆ. ಬೀಜಾಕ್ಷರಗಳಿರುವ ಚೌಕದ ಸುತ್ತಲೂ ರಜೋಗುಣ, ತಮೋಗುಣ, ಸತ್ವಗುಣಗಳ ಸಂಕೇತವಾಗಿರುವ ತ್ರಿಶೂಲಗಳನ್ನು ಕೆತ್ತಲಾಗಿದೆ. ಶಿಲೆಯ ಮೇಲುತುದಿಯಲ್ಲಿ ಸೂರ್ಯ, ಚಂದ್ರನ ರೇಖಾಚಿತ್ರಗಳಿವೆ. ಇದು ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾಗಿರುತ್ತದೆ ಎಂಬುದನ್ನು ಸೂಚಿಸುತ್ತವೆೆ. ಬೀಜಾಕ್ಷರಗಳನ್ನು ಹೊಂದಿರುವ ಚೌಕಾಕಾರದ ಮನೆಗಳ ಕೆಳಭಾಗದಲ್ಲಿ ತಮಿಳು ಲಿಪಿಯಲ್ಲಿ ಉರಂಡಕಂ ಎಂದು ಬರೆಯಲಾಗಿದೆ.
ಈ ಬಗೆಯ ಶಾಸನದ ಪತ್ತೆಗೆ ಭಾರತೀಯ ಭಾಷಾ ಸಂಸ್ಥಾನದ ಆಡಳಿತಾತ್ಮಕ ಸಹಾಯಕ ನಿರ್ದೇಶಕ ಡಾ.ಪಂಕಜ್ ದ್ವಿವೇದಿ ಮತ್ತು ಶಾಸ್ತ್ರೀಯ ಭಾಷೆಗಳ ಮುಖ್ಯಸ್ಥ ಡಾ.ಎಲ್.ಆರ್ ಪ್ರೇಮ್‌ಕುಮಾರ್ ಆಡಳಿತಾತ್ಮಕ ನೆರವು ನೀಡಿದ್ದಾರೆ. ತಾಂತ್ರಿಕ ಸಿಬ್ಬಂದಿಗಳಾದ ಎಸ್.ತೋಳ್ಕಾಪಿಯನ್, ಹೊಯ್ಸಳಕುಮಾರ್, ಸಾಗರ್ ಸಹಕಾರ ನೀಡಿದ್ದಾರೆ. ಕೇಂದ್ರದ ಕಚೇರಿ ಸಹಾಯಕರಾದ ಶಶಿಕುಮಾರ್, ಸ್ಥಳಿಯರಾದ ಅಶೋಕ, ಪ್ರಮೋದ, ದಿವಾಕರ, ಸಿದ್ದರಾಜು ಹಾಗೂ ಕುಳ್ಳ ಮರಿಗೌಡ ಶಾಸನದ ಪಡಿಯಚ್ಚು ತೆಗೆಯಲು ತಂಡಕ್ಕೆ ನೆರವಾದರು.

ಹಿಂದೆ ಕಾಲರ, ಸಿಡುಬು, ಪ್ಲೇಗ್‌ನಂತಹ ಮಹಾಮಾರಿ ರೋಗಗಳು ಜನರನ್ನು ಆಹುತಿ ತೆಗೆದುಕೊಳ್ಳುತ್ತಿತ್ತು. ಇಂತಹ ಸಾಂಕ್ರಾಮಿಕ ರೋಗಗಳು ಗ್ರಾಮಗಳಿಗೆ ತಟ್ಟದಿರಲೆಂದು ಹಾಗೂ ಜನ, ಜಾನುವಾರುಗಳಿಗೆ ಬರುವ ಕಾಯಿಲೆಗಳು ಗ್ರಾಮಗಳ ಒಳಗೆ ಪ್ರವೇಶಿಸಬಾರದೆಂಬ ಕಾರಣಗಳಿಂದಲೂ ಜನರು ಈ ಬಗೆಯ ಮಂತ್ರದ ಕಲ್ಲನ್ನು ಪ್ರವೇಶದ್ವಾರಗಳಲ್ಲಿ ನಿಲ್ಲಿಸುವ ಪರಿಪಾಠವಿತ್ತು. ಹಾಗೆಯೇ ವೈರಿಗಳು ಇಡೀ ಊರಿಗೆ ಮಾಟ, ಮಂತ್ರ ಮಾಡಿಸುತ್ತಿದ್ದ ವಾಡಿಕೆ ಇತ್ತು. ಅಂತಹ ದುಷ್ಟಶಕ್ತಿಗಳಿಂದ ಗ್ರಾಮವನ್ನು ರಕ್ಷಣೆ ಮಾಡಬೇಕೆನ್ನುವ ಉದ್ದೇಶದಿಂದ ಗ್ರಾಮಸ್ಥರು ತಮ್ಮ ಸ್ಥಳೀಯ ನಂಬಿಕೆಯ ದೈವಕ್ಕೆ ಸಂಬಂಧಿಸಿದ ಮಂತ್ರ-ತಂತ್ರದ ಬೀಜಾಕ್ಷರಗಳನ್ನು ಶಿಲೆಗಳ ಮೇಲೆ ಬರೆಸಿ ಗ್ರಾಮದ ಪ್ರವೇಶದ್ವಾರಗಳಲ್ಲಿ ನಿಲ್ಲಿಸುತ್ತಿದ್ದರು
ಡಾ.ಸಿ.ಎ.ಶಶಿಧರ
ಹಿರಿಯ ಸಂಶೋಧಕರು
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ